ನಾನೂ…. ನನ್ನ ಕನಸು

‘ಓ ಮನಸೇ’ಯ ಓದುಗರಿಗಾಗಿ ಹೊಸ ಅಂಕಣ :  ನಾನೂ….ನನ್ನ ಕನಸು

Naanu nanna kanasu

ಜಗತ್ತು ಅನ್ನುವುದು ಕಿಕ್ಕಿರಿದ ಕನಸುಗಳ ಮಾರುಕಟ್ಟೆ. ಕನಸು ಕಾಣುವವರು, ಕನಸು ಮಾರುವವರು, ಕನಸು ಕೊಳ್ಳುವವರು, ನಿಮ್ಮ ಕನಸಿಗೊಂದು ಕಣ್ಣು ಕೊಡುವವರು, ಹೀಗೆ ಥರಹೇವಾರಿ ಜನರು ಇಲ್ಲಿದ್ದಾರೆ. ಪುಟ್ಟ ಕಂದನಿಗೆ ಬಸ್ ಕಂಡಕ್ಟರ್ ಆಗುವ ಕನಸು, ಹೋಟೆಲ್ ಮಾಣಿಗೆ ಮುಂದೊಂದು ದಿನ ತಾನೇ ಗಲ್ಲದಲ್ಲಿ ಕೂರುವ ಕನಸು, ಡ್ಯುಯೆಟ್ ಸಾಂಗಲ್ಲಿ ಹಿಂದಿನ ಸಾಲಲ್ಲಿ ಕುಣಿಯುವ ಜೂನಿಯರ್ ಕಲಾವಿದೆಗೆ ನಾಯಕಿಯಾಗುವ ಕನಸು, ಗ್ಯಾರೇಜಲ್ಲಿ ನಟ್ಟುಬೋಲ್ಟುಗಳೊಂದಿಗೆ ಗುದ್ದಾಡುವ ಬಾಲಕಾರ್ಮಿಕನಿಗೆ ದೊಡ್ಡ ಮೆಕಾನಿಕ್ ಆಗುವ ಕನಸು, ಸಿಇಟಿ ಪರೀಕ್ಷೆಗೆ ಕುಳಿತ ಹುಡುಗನಿಗೆ ಸಾಫ್ಟ್ ವೇರ್ ಇಂಜಿನಿಯರ್ ಆಗುವ ಕನಸು, ಯಾವುದೋ ಪಕ್ಷದ ಜಿಲ್ಲಾಧ್ಯಕ್ಷನಿಗೆ ಮಂತ್ರಿಯಾಗುವ ಕನಸು, ಕವಿಗೆ ಪ್ರಶಸ್ತಿಯ ಕನಸು….

ಕನಸು ಕಾಣುವುದಕ್ಕೆ ಕಾಸು ಕೊಡಬೇಕಾಗಿಲ್ಲ. ಹಾಗಾಗಿ ಇಲ್ಲಿ ಎಲ್ಲರೂ ರವಿಚಂದ್ರನ್ ಥರ ಕನಸುಗಾರರೇ. ಅವರವರ ಭಾವಕ್ಕೆ, ಭಕುತಿಗೆ, ಅವರ ಬದುಕಿನ ಮಟ್ಟಕ್ಕೆ, ಅವರಿರುವ ಪರಿಸರಕ್ಕೆ, ವಯಸ್ಸಿಗೆ, ಮನಸ್ಸಿಗೆ ತಕ್ಕಂತೆ ಕನಸು ಕಾಣುತ್ತಾರೆ. ಆದರೆ ಆ ಕನಸು ಸಾಕಾರಗೊಳ್ಳುವುದು ಸುಲಭ ಅಲ್ಲ. ಅದಕ್ಕೆ ಪರಿಶ್ರಮ ಪಡಬೇಕು, ಶ್ರದ್ಧೆ ಇರಬೇಕು, ಒಂಚೂರು ಅದೃಷ್ಟವೂ ಜೊತೆಗಿರಬೇಕು. ಉದಾಹರಣೆಗೆ ಕೆಲವೊಮ್ಮೆ ನಿಮ್ಮ ಕನಸುಗಳಿಗೂ, ನಿಮ್ಮ ಬಗ್ಗೆ ಅಪ್ಪಅಮ್ಮ ಕಾಣುವ ಕನಸುಗಳಿಗೂ ಪರಸ್ಪರ ಡಿಕ್ಕಿಯಾಗಿ ಮನೆಯ ನೆಮ್ಮದಿ ಹದಗೆಡಬಹುದು. ಡೊನೇಷನ್ ಕೊಡುವುದಕ್ಕಾಗದೇ ಇಂಜಿನೀಯರ್ ಆಗುವ ಕನಸು ಚಿಗುರೊಡೆಯುವುದಕ್ಕೆ ಮುಂಚೆಯೇ ಸಾಯಬಹುದು.  ಬಿಸಿನೆಸ್ ಮಾಡ್ತೀನಿ ಎಂದು ಕನಸು ಕಂಡಾತ ಇಂದು ಪತ್ರಕರ್ತನಾಗುವ ಚೋದ್ಯ ಸಂಭವಿಸಬಹುದು. ಹಿಂದೆಂದೋ ಕಂಡ ಕನಸು ಫಲಿಸದಿದ್ದರೇನಂತೆ, ಈಗಿರುವ ಸ್ಥಿತಿಗತಿಗೇ ಹೊಂದಿಕೊಂಡು ಸುಖವಾಗಿರುವವರೂ ಇದ್ದಾರೆ. ಇನ್ನು ಕೆಲವರು ಭಗ್ನಗೊಂಡ ಕನಸಿನ ನೆನಪಲ್ಲಿ ಕೊರಗುತ್ತಾ ಕಾಲಕಳೆಯುತ್ತಾರೆ.

ಅಂದಹಾಗೆ ನೀವು ನಿಮ್ಮ ಭವಿಷ್ಯದ ಬಗ್ಗೆ ಹಿಂದೆ ಕಂಡ ಕನಸೇನು? ಅದು ಫಲಿಸಿದೆಯಾ? ಅದು ಸಾಧ್ಯವಾಗಿದ್ದು ಹೇಗೆ? ಫಲಿಸಲಿಲ್ಲವಾ? ಹಾಗಿದ್ದರೆ  ಅದಕ್ಕೆ ಕಾರಣಗಳೇನು? ನೀವೀಗ ಏನಾಗಿದ್ದೀರಿ? ನಿಮ್ಮ ಇಂದಿನ ಸ್ಥಿತಿಗತಿ ನಿಮಗೆ ನೆಮ್ಮದಿಯನ್ನು ನೀಡಿದೆಯಾ? ಇವೆಲ್ಲವನ್ನೂ ಪುಟ್ಟ ಲೇಖನದ ರೂಪದಲ್ಲಿ ನೂರು ಪದಗಳಿಗೆ ಮೀರದಂತೆ ಬರೆದು ಕಳಿಸಿ. ನಾವು ಅದನ್ನು ‘ಓ ಮನಸೇ’ ಪತ್ರಿಕೆಯಲ್ಲಿ ಪ್ರಕಟಿಸುತ್ತೇವೆ.  ನಿಮ್ಮ ಅನುಭವ ಇತರೇ ಕನಸುಗಾರರಿಗೆ ಮಾದರಿಯಾಗಲಿ, ಬದುಕಿನ ಪಾಠವೂ ಆಗಲಿ.

 ಅಂಕಣದ ಹೆಸರು ನಾನು..ನನ್ನ ಕನಸು.

ನಿಮ್ಮ ಲೇಖನಗಳನ್ನು ಕಳಿಸಬೇಕಾದ ವಿಳಾಸಃ
ಓ ಮನಸೇ,  ನಂ.2, 80 ಅಡಿ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಬಂಕ್ ಬಳಿ, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560070.

ಈ ಕೆಳಗಿನ Form ಮೂಲಕವೂ ತಮ್ಮ ಕನಸನ್ನು ಕಳಿಸಬಹುದು.

ನಾನೂ....ನನ್ನ ಕನಸು

 

Verification

 

109th highlights

ಕಣ್ಣುಗಳ ಪಿಸುಮಾತನ್ನೂ ಪದಗಳಲ್ಲಿ ಹಿಡಿದಿಟ್ಟ ಭಾಷೆಯುಂಟು

109ಎಷ್ಟೋ ಸಲ ನಮ್ಮ ಭಾವನೆಗಳನ್ನು ಭಾಷೆಯಲ್ಲಿ ಹೇಳಲಾಗದ ಅಸಹಾಯಕ ಸ್ಥಿತಿಯಲ್ಲಿರುತ್ತೇವೆ. ಅಂಥಾದ್ದೊಂದು ಭಾವನೆಗೂ ಒಂದು ಶಬ್ದ ಇದ್ದರೆ ಚೆನ್ನಾಗಿತ್ತೆಂದು ಅನಿಸುತ್ತದೆ. ಭಾವನೆಗಳ ರಿಲೇ ಓಟದಲ್ಲಿ ಭಾಷೆ ಸೋಲುವುದು ಹೀಗೆ. ತನ್ನ ಭಾಷೆಯೇ ಶ್ರೇಷ್ಠ ಎನ್ನುವ ಯಾರ ಬತ್ತಳಿಕೆಯಲ್ಲೂ ಹೀಗೆ ಎಲ್ಲಾ ಭಾವನೆಗಳಿಗೆ ನಾಲಗೆ ಕೊಡುವ ಕಸುವು ಇರುವುದಿಲ್ಲ. ಅಲ್ಲೊಮ್ಮೆ ಇಲ್ಲೊಮ್ಮೆ ಭಾವನೆಯ ಅನಂತರೂಪಕ್ಕೆ ಭಾಷೆ ಬೆರಗಾಗಿ ಸೋಲಲೇಬೇಕು. ಹಾಗೆ ಸೋತರೇನೇ ಅದು ಜೀವಂತಭಾಷೆ. ಮಾತನ್ನು ಸೋಲಿಸುವ ಅಂಥಾ ಭಾವನೆಗಳಾದರೂ ಯಾವುವು? ಭಾವಜೀವಿಗಳು ಓದಲೇಬೇಕಾದ ಲೇಖನಃ ಭಾಷೆಗು ಮೀರಿದ ಭಾವಗೀತೆ

ತಂತ್ರಜ್ಞಾನ ಅನ್ನೋದು ತುಂಬ ಕೆಟ್ಟದ್ದು ಅಥವಾ ಒಳ್ಳೆಯದು. ಅದು ನಿಮ್ಮ ಜಾತಕ ಕೇಳುವುದಿಲ್ಲ, ಬುದ್ಧಿಮತ್ತೆ ಪರಿಗಣಿಸುವುದಿಲ್ಲ. ನೀವು ಯಾವ ಹುದ್ದೆಯಲ್ಲಿದ್ದೀರಿ ಅನ್ನುವುದನ್ನು ಕಣ್ಣೆತ್ತಿ ನೋಡುವುದಿಲ್ಲ. ತನ್ನ ನಿರ್ದಾಕ್ಷಿಣ್ಯ ಕೈಯನ್ನು ನಿಮ್ಮ ಮುಂದೆ ಹಿಡಿದು ಹೋಗು ನಿಂಗೆ ವಯಸ್ಸಾಗಿದೆ ಅನ್ನುತ್ತೆ. ಹೊಸಹೊಸ ಮೊಬೈಲ್, ಕಂಡುಕೇಳರಿಯದ ಆಪ್ ತಂತ್ರಜ್ಞಾನ, ಸರಕ್ಕನೆ ದಾಟಿಹೋಗುವ ಕಾಲಮಾನ, ಎಂಥಾ ಹೊಸತು ಕೂಡಾ ಹಳತಾಗೋ ಕೆಟ್ಟವೇಗ…ಸ್ಪೀಡಾಗಿದೆ ಜಮಾನಾ. ಯೋಚನೆ ಮಾಡಿ, ನಿಮಗೂ ವಯಸ್ಸಾಗ್ತಿದೆ ಅಂತ ಅನಿಸೋದಕ್ಕೆ ಶುರುವಾಗಿದ್ಯಾ? ತಂತ್ರಜ್ಞಾನದ ಮುಂದೆ ಸೋತವರ ಕತೆಯಿದುಃ ನಿನ್ನ ಮುಪ್ಪಿಗೆ ನೀನೇ ಕಾರಣ

ಚಿರಾಪುಂಜಿಯಲ್ಲೇ ಮಳೆಯಿಲ್ಲ, ಪ್ರಕೃತಿ ಮುನಿದಿದೆ ಅಂತಾರೆ. ಅದು ಮುನಿಯುವುದಿಲ್ಲ, ತನ್ನ ಪತನಕ್ಕೆ ಕಾರಣವಾದ ಮನುಷ್ಯನನ್ನು ಬರ್ಬರವಾಗಿ ಹಿಂಸಿಸುತ್ತದೆ. ಅದರ ಬರ್ಬರತೆಗೆ ಸಿಕ್ಕರೆ ಎಂಥಾ ಮನುಷ್ಯನೂ ನೆಲಕ್ಕೆ ಬೀಳುತ್ತಾನೆ. ಮಲೆನಾಡಿನಲ್ಲಿ ಈಗ ಮಳೆಯಿಲ್ಲ, ಮರವಿಲ್ಲ. ಮರ ಕಡಿದು ಮನೆ ಮಾಡಿದ್ದಾರೆ. ಹಾಗಾಗಿ ನೆರಳೂ ಇಲ್ಲ. ತಪ್ಪು ನಮ್ಮದೇ. ಯಾರಾದರೂ ಅಷ್ಟೇ ಬದುಕಿನ ವಿರುದ್ಧ ಗೊಣಗಬಾರದು, ಕಂಪ್ಲೇಂಟ್ ಮಾಡಬಾರದು. ಬದುಕು ದುಷ್ಟ ವ್ಯಕ್ತಿಯಲ್ಲ. ಅದು ಎಲ್ಲವನ್ನೂ ಕೊಡುತ್ತದೆ. ಹಾಗಂತ ರವಿ ಬೆಳಗೆರೆ ಬರೀತಾರೆ.
ಮನಸಿನ್ಯಾಗಿನ ಮಾತು
ನಾನು ಒಬ್ಬರನ್ನು ಪ್ರೀತಿಸಿ ಮದುವೆಯಾದೆ. ಆರಂಭದ ಮೂರು ವರ್ಷ ಚೆನ್ನಾಗಿತ್ತು. ಆದರೆ ಆರುವರ್ಷವಾದರೂ ನಾನು ಗರ್ಭ ಧರಿಸಲಿಲ್ಲ. ವೈದ್ಯರು ಹೇಳಿದರು, ನನ್ನ ಗಂಡನಿಂದ ನಾನು ತಾಯಿಯಾಗಲಾರೆ ಎಂದು. ಅಲ್ಲಿಂದ ಅವರ ಕಿರಿಕಿರಿ ಶುರುವಾಯಿತು. ನನ್ನ ಫೋನ್ ಕಾಲ್ ಗಳನ್ನು ಚೆಕ್ ಮಾಡುವುದಕ್ಕೆ ಶುರುಮಾಡಿದರು. ಹಂಗಿಸಿ ಮಾತಾಡುತ್ತಾರೆ, ಬೈಯ್ಯುತ್ತಾರೆ. ಈ ಕಿರಿಕಿರಿಯಿಂದಾಗಿ ನಾನು ಇನ್ನೊಬ್ಬರ ಸಂಗ ಮಾಡಿದೆ. ಬಂಜೆ ಎಂಬ ಅಪವಾದದಿಂದ ದೂರವಾಗಬೇಕಾಗಿತ್ತು, ನನ್ನದೇ ಮಗುವಿನ ಮಧುರವಾದ ಘಮ ಅನುಭವಿಸಬೇಕಾಗಿತ್ತು. ಈಗ ನನ್ನ ಗಂಡ ನನ್ನ ಜೊತೆ ಮಾತು ಬಿಟ್ಟಿದ್ದಾರೆ. ನಾನೀಗ ಏನು ಮಾಡಲಿ? ಸಮಾಧಾನ ಅಂಕಣಕ್ಕೆ ಗೃಹಿಣಿಯೊಬ್ಬಳು ಬರೆದ ಪತ್ರವಿದು. ಈ ಸಮಸ್ಯೆಗೆ ರವಿ ಬೆಳಗೆರೆ ನೀಡಿದ ಉತ್ತರವಾದರೂ ಏನು?
ಎಷ್ಟು ಜೀವ ತೇಯ್ದರೂ ಅದಕ್ಕೆ ಬೆಲೆಯೇ ಇಲ್ಲ
ಕೆಲವರು ವರ್ಷದಲ್ಲೊಂದು ದಿನ ಪ್ಯಾಂಟು ಹಾಕದೇ ಚಡ್ಡಿಯಲ್ಲೇ ಓಡಾಡುತ್ತಾರೆ, ಫ್ಲಾಷ್ ಮಾಬ್ ಹೆಸರಲ್ಲಿ ಹಠಾತ್ತನೆ ಸನ್ನಿ ಹಿಡಿದವರಂತೆ ರೇಲ್ವೇ ಸ್ಟೇಷನ್ನಿನಲ್ಲಿ ಡ್ಯಾನ್ಸ್ ಮಾಡುತ್ತಾರೆ, ಟ್ರಾಫಿಕ್ ಪೊಲೀಸರಿಗೆ ಗುಲಾಬಿ ಹೂ ಕೊಡುತ್ತಾರೆ. ಇವರ್ಯಾರೂ ಹುಚ್ಚರಲ್ಲ. ಇವೆಲ್ಲವೂ ಜನರ ಗಮನವನ್ನು ಸೆಳೆಯುವ ಉಪಾಯಗಳು. ಯಾವುದಾದರೂ ಕೆಲಸಕ್ಕೆ ಜನರ ಬೆಂಬಲ ಗಿಟ್ಟಿಸಬೇಕು ಎಂದರೆ ಅವರಲ್ಲಿ ಕುತೂಹಲ ಹುಟ್ಟಿಸಬೇಕು. ಅದಕ್ಕೆ ಇಂಥಾ ಕ್ರೇಜಿ ಐಡಿಯಾಗಳೇ ಬೇಕು. ಅದರಿಂದ ಜಗತ್ತು ಬದಲಾಗುತ್ತದೆ ನೀವೂ ಕ್ರೇಜಿವಾಲಾ ಆಗಬಹುದು
ಮನಸ್ಸು ನೆನೆಯುತ್ತದೆ, ಉರಿವ ಒಲೆಗಳ ಮುಂದೆ ಕಳೆದ ದಿನಗಳನ್ನು. ಕಿಚ್ಚಲ್ಲದ ಧಗೆಯನ್ನು ಹೊತ್ತಿಸಿದ ತಾರುಣ್ಯದ ಸಂಬಂಧಗಳನ್ನು, ಗಡಿಯಾರದೊಳಗಿಂದ ಯಾವಾಗಲೋ ಬಂದು ಮನಸ್ಸನ್ನು ಕದ್ದ ಸಂಗಾತಿಯನ್ನು. ಅವನೊಡನೆ ತಾನಿಟ್ಟ ಹೆಜ್ಜೆಗಳನ್ನು. ಉರಿವ ಒಲೆಯ ಮುಂದೆ ನಾನೂ ಉರಿಯುತ್ತಿದ್ದೇನೆ, ನಿರಂತರವಾಗಿ, ಹಿಡಿಪ್ರೀತಿಗಾಗಿ. ದೆಹಲಿಯಿಂದ ರೇಣುಕಾ ಕಳಿಸಿದ ರಾಜಧಾನಿ ಮೇಲ್ ಬಂದಿದೆಃ ಉರಿವ ಒಲೆಗಳ ಮುಂದೆ

ಜಾತ್ರೆ ಯಾಕೆ ನೋಡಬೇಕು? ರಥ ಯಾಕೆ ಎಳೀಬೇಕು? ಉತ್ತರ ‘ಆಚಾರ ವಿಚಾರ’ದಲ್ಲಿದೆ. ಆನ್ ಲೈನ್ ನಲ್ಲಿ ದುಡ್ಡು ಕಳಕೊಳ್ಳುವ ಮುನ್ನ ‘ಲಾ ಪಾಯಿಂಟ್’ ಓದಿ. ನಾವು ಸೇವಿಸುವ ಆಹಾರ ಹೇಗಿರಬೇಕು? ‘ಹಸನ್ಮುಖಿ’ ಅಂಕಣದಲ್ಲಿ ವಿವರಗಳಿವೆ. ಕೈಯಲ್ಲೇ ಹಿಡಿದುಕೊಂಡು ಓಡಾಡಬಹುದಾದ ಮಿನಿ ಕಂಪ್ಯೂಟರ್ ಒಂದು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ ಗೊತ್ತಾ? ‘ವಾಟ್ಸ್ ಅಪ್’ ಅಂಕಣದಲ್ಲಿ ಫುಲ್ ಡೀಟೇಲ್ಸ್. ರೈತನ ಮಗ ಗುಮಾಸ್ತನಾಗುತ್ತಾನೆ, ಗುಮಾಸ್ತನ ಮಗ ರೈತನಾಗುತ್ತಾನೆ. ಯಾಕೆ ಹೀಗೆ? ಜಾನಕಿಯ ‘ತಂದೆತಾಯಿ ದೇವರಲ್ಲ’ ಅಂಕಣ ಓದಿ.
ಮೊದಲ ಪ್ರೇಮಪತ್ರದ ಮೂರನೇ ಭಾಗದಲ್ಲಿ ಪ್ರೇಮಾಚಾರಿಗಳ ಕಲರವವಿದೆ. ‘ಸೈಡ್ ವಿಂಗ್’ ನಲ್ಲಿ ಮೊದಲರಾತ್ರಿ ಕುರಿತಾದಂತೆ ಒಂದು ಟಿಪ್ಪಣಿ ಇದೆ. ನವವಿವಾಹಿತರು ಓದಿಕೊಳ್ಳಿ. ಆಕಾಶದಲ್ಲಿ ಚಂದ್ರನೇ ಇರದಿದ್ದರೆ ಏನಾಗ್ತಿತ್ತು ಅಂತ ‘ಸೈನ್ಸ್ ಪೇಜ’ಲ್ಲಿ ವಿನಯ್ ಭಟ್ ಬರೆದಿದ್ದಾರೆ. ‘ಸಮಾಧಾನ’ ಈ ಬಾರಿ ಭರ್ತಿ ಎಂಟು ಪುಟಗಳಿವೆ ಅನ್ನೋದೇ ಈ ಸಂಚಿಕೆಯ ವಿಶೇಷ. ಜೊತೆಗೆ ಮಿಕ್ಕೆಲ್ಲಾ ಅಂಕಣಗಳು ಉಂಟು.
‘ಓ ಮನಸೇ’ – ಇದು ಹೊತ್ತಲ್ಲದ ಹೊತ್ತಲ್ಲಿ ಸುರಿಯುವ ಬೆಂಗಳೂರಿನ ಮಳೆಯಂತಲ್ಲ, ವರ್ಷಪೂರ್ತಿ ಮನಸ್ಸಿಗೆ ತಂಪೆರೆಯುವ ಸೋನೆಮಳೆ. ತಪ್ಪದೇ ಓದಿ, ಮನಸ್ಸು ತಂಪಾಗಿಸಿಕೊಳ್ಳಿ

108th highlights

108ನೇ ಸಂಚಿಕೆಯಲ್ಲೇನಿದೆ.. ಇಲ್ಲಿದೆ ನೋಡಿ ವಿಡಿಯೋ ಪ್ರಾತ್ಯಕ್ಷಿತೆ.

youtube

ಸಿಟಿ ಲೈಫ್ ಹುಡುಗಿಯರಿಗೆ ಸೇಫಾ?

1884479ಅಲ್ಲೆಲ್ಲೋ ಯಾರೋ ಒಬ್ಬ ಕಿರಾತಕ ಯಾವುದೋ ಪಿಜಿಗೆ ನುಗ್ಗಿ ಬೇರೆ ರಾಜ್ಯದ ಹುಡುಗಿಯನ್ನು ರೇಪ್ ಮಾಡಿದ್ದಾನೆ. ಕತ್ತಲ ದಾರಿಯಲ್ಲಿ ಹೋಗುತ್ತಿದ್ದ ಹುಡುಗಿಯನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ. ದಿನ ಬೆಳಗಾದರೆ ಇಂಥದ್ದೇ ಬ್ರೇಕಿಂಗ್ ನ್ಯೂಸುಗಳು ಕಣ್ಣಿಗೆ, ಕಿವಿಗೆ ಬೀಳುತ್ತವೆ. ಸುದ್ದಿಯಾಗದೇ ಹೋದ ಕತೆಗಳೆಷ್ಟು ಅನ್ನೋದರ ಲೆಕ್ಕ ಕೊಡೋಕೆ ಯಾರಿಂದಲೂ ಸಾಧ್ಯವಿಲ್ಲ. ಇಂಥಾ ಸ್ಥಿತಿಯಲ್ಲಿ ಪರವೂರಿಂದ ಬಂದ ಹುಡುಗಿಯರಿಗೆ ಈ ಬೆಂಗಳೂರಂಥಾ ಸಿಟಿಯಲ್ಲಿರೋಕೆ ಭಯ ಆಗಲ್ವಾ? ನಗರ ಬದುಕು ನಮ್ಮ ಹುಡುಗಿಯರ ಪಾಲಿಗೆ ನರಕವಾಗಿದೆ ಅನ್ನುವ ಸುದ್ದಿಯಲ್ಲಿ ಸತ್ಯ ಎಷ್ಟು ಮಿಥ್ಯ ಎಷ್ಟು? ಈ ಲೇಖನ ಹುಡುಗಿಯರಿಗೆ ಮಾತ್ರ!

ಪದೇಪದೆ ನೆನಪಾದೆ… ಪದೇಪದೆ ಮರೆಯಾದೆ!

someone-erasing-drawing-human-brainಬೇಡದ ನೆನಪುಗಳನ್ನು ಅಳಿಸುವ ತಂತ್ರಜ್ಞಾನ ಬರಲಿದೆ. ‘ಮರೆತೇನಂದ್ರ, ಮರೀಲಿ ಹ್ಯಾಂಗ’ ಎನ್ನುತ್ತಾ ಹಳೆಯ ಭೀಕರ ನೆನಪುಗಳ ಹ್ಯಾಂಗೋವರ್ನಿಂದ ಪಾರಾಗದವರ ಹಿತಕ್ಕೆಂದು ಅನಗತ್ಯ ನೆನಪುಗಳನ್ನಷ್ಟೇ ಅಳಿಸುವ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದೆ. ‘ನಿಮಗೆ ಜಾಣ ಮರೆವು’ ಎಂದು ಮಡದಿ ಮೂದಲಿಸಿದರೆ ವಿಜ್ಞಾನಿಗಳತ್ತ ಮುಗುಳ್ನಗುತ್ತಲೇ ಬೆರಳು ತೋರಿಸಬಹುದು! ವೈಜ್ಞಾನಿಕ ಲೇಖನಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರಾದ ಸುಂದ್ರ ಹಾಲ್ದೋಡ್ಡೇರಿ ಅವರು ನೆನಪುಗಳ ಬಾಧೆಯಿಂದ ಬಳಲುತ್ತಿರುವವರಿಗೆ ಒಂದು ಸಿಹಿಸುದ್ದಿ ನೀಡಿದ್ದಾರೆ. ಮರೆಯುವ ಮುನ್ನ ಓದಿರಿ.

ಕನ್ನಡ ಸಿನಿಮಾ ಇನ್ ಕೋಮಾ!

mungarumaleಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ! ಕಳೆದ ಎರಡು ದಶಕಗಳಿಂದಲೂ ಇದೇ ಮಾತು ಆಡಿಆಡಿ ಚಿತ್ರೋದ್ಯಮಿಗಳ ನಾಲಿಗೆ ಬಿದ್ದು ಹೋಗಿದೆ. ಆದರೆ ಈಗ ಪರಿಸ್ಥಿತಿ ಕೈಮೀರಿ ಹೋಗಿದೆಯಂತೆ. ಚಿತ್ರರಂಗವನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ಇಡಲಾಗಿದೆ, ಸರಿಯಾದ ಟ್ರೀಟ್ ಮೆಂಟ್ ದೊರಕದೇ ಹೋದರೆ ಕೋಮಾಕ್ಕೆ ಹೋಗುವ ಅಪಾಯವಿದೆ ಅನ್ನುತ್ತಿದ್ದಾರೆ ಹಿರಿಯ ಚಿತ್ರಕರ್ಮಿಗಳು. ಆದರೆ ಇದು ಗೊತ್ತಿದ್ದೂ ಸ್ಟಾರುಗಳು ತಮ್ಮ ಇಮೇಜು ಕಾಪಾಡಿಕೊಳ್ಳುವಲ್ಲಿ ನಿರತರಾಗಿದ್ದರೆ, ನಿರ್ಮಾಪಕರು ಜೇಬು ಮುಟ್ಟಿಕೊಳ್ಳುತ್ತಿದ್ದಾರೆ. ಪ್ರೇಕ್ಷಕ ಕೆಟ್ಟದ್ದವನ್ನು ನೋಡಲಾರೆ ಎಂಬಂತೆ ಕಣ್ಣು ಮುಚ್ಚಿ ಕುಳಿತಿದ್ದಾನೆ.

ಯಾರೀ ಕುಮಾರೆ?

1273ಭಾರತದಿಂದ ಬಂದ ಸ್ಪುರದ್ರೂಪಿ ಸನ್ಯಾಸಿಯೊಬ್ಬ ಅಮೆರಿಕಾದ ಒಂದೂರಿನ ಜನರನ್ನು ತನ್ನ ವಿಶಿಷ್ಟ ಸಿದ್ಧಾಂತದಿಂದ ಆಕರ್ಷಿಸುತ್ತಾನೆ. ಆತನ ಮಾತು, ಚಿಂತನೆ, ಯೋಗ, ಧ್ಯಾನಗಳೆಲ್ಲವೂ ಇತರೇ ಸ್ವಾಮೀಜಿಗಳಿಗಿಂತ ಭಿನ್ನವಾಗಿರುತ್ತದೆ. ಕೆಲವೇ ದಿನಗಳಲ್ಲಿ ಈ ಗುರು ವಿಪರೀತ ಜನಪ್ರಿಯತೆ ಸಂಪಾದಿಸುತ್ತಾನೆ. ಮಾದಕ ವ್ಯಸನಕ್ಕೆ ಬಲಿಯಾದವರು, ವಿಚ್ಛೇದನಕ್ಕೊಳಗಾದ ಹೆಣ್ಮಕ್ಕಳು, ವೃದ್ಧರು, ತತ್ವಶಾಶ್ತ್ರ ಪಂಡಿತರು ಇವರೆಲ್ಲರೂ ಈತನ ಶಿಷ್ಯತ್ವ ಸ್ವೀಕರಿಸುತ್ತಾರೆ. ಆದರೆ ಮುಂದೊಂದು ದಿನ ಅವರಿಗೆ ಆಘಾತ ಕಾದಿರುತ್ತದೆ. ಏನದು? ನಕಲಿ ಗುರೂಜಿಯ ಅಸಲಿ ಕತೆ ಓದಿರಿ.

ಯಾಕ್ ಯಾಕ್ ಚಿಕ್ಕಪ್ಪ, ಕಣ್ಕಣ್ ಬಿಡ್ತೀಯ?

ಇದೊಂದು ಕಸರತ್ತು. ಪದಗಳನ್ನು ತಿರುತಿರುಚಿ ಹೇಳುವುದು. ಇಂಗ್ಲಿಷಲ್ಲಿ tongue twisters ಅನ್ನುತ್ತಾರೆ. ಶುದ್ಧಕನ್ನಡದಲ್ಲೇ ಹೇಳುವುದಾದರೆ ನಾಲಗೆ ತಿರುಚಕಗಳು. ಇವುಗಳನ್ನು ಆದಷ್ಟು ಅಭ್ಯಾಸ ಮಾಡಿದರೆ ಕ್ಲಿಷ್ಟ ಮಾತುಗಳನ್ನು ಕೂಡ ಸರಾಗವಾಗಿ ಹೇಳುವ ಕಲೆ ಒಲಿಯುತ್ತದೆ; ನಾಲಗೆ ಹೇಗೆ ಬೇಕೋ ಹಾಗೆ ಹೊಳ್ಳಾಡುತ್ತದೆ. ವೇದಿಕೆಯಲ್ಲಿ ನಿಂತು ನಾಕು ಜನರೆದುರು ಭಾಷಣ ಮಾಡುವವರಿಗೆ, ಕ್ಲಾಸಿನಲ್ಲಿ ಪಾಠ ಮಾಡುವ ಶಿಕ್ಷಕರಿಗೆ, ನಾಟಕದ ಪಾತ್ರಧಾರಿಗಳಿಗೆ ಇಂತಹ ವಾಗ್ದೇವಿ-ವರ ಇರುವುದು ಒಳ್ಳೆಯದು. ಜಗತ್ತಿನ ನಾನಾ ಭಾಷೆಗಳಲ್ಲಿ ಇಂತಾ ತಿರುಚುಕಗಳು ಯಾವ್ಯಾವ ರೀತಿಯಲ್ಲಿ ಪ್ರಯೋಗವಾಗಿದೆ ಅನ್ನುವುದರ ಬಗ್ಗೆ ಇಲ್ಲಿ ವಿವರಗಳಿವೆ. ನಗಿಸುವುದರ ಜೊತೆಗೆ ಜ್ಞಾನವನ್ನೂ ವಿಸ್ತಾರವಾಗಿಸುವ ಲೇಖನವಿದು.

ಮೊದಲ ಪ್ರೇಮಪತ್ರದ ಎರಡನೇ ಕಂತು

loveಪ್ರೇಮಿಗಳ ದಿನಕ್ಕೆಂದು ಆಹ್ವಾನಿಸಿದ ಪ್ರೇಮಪತ್ರಗಳ ರಾಶಿಯಿಂದ ಆಯ್ದ ಇನ್ನೊಂದಿಷ್ಟು ಪ್ರೇಮಪತ್ರಗಳು ಇಲ್ಲಿವೆ. ಇನ್ನೊಂದಿಷ್ಟು ಮುಂದಿನ ಸಂಚಿಕೆಯಲ್ಲಿ. ಭಗ್ನಪ್ರೇಮಿಗಳಿಗೆ ಇಲ್ಲೂ ನಿರಾಶೆಯಾಗಬಾರದು ಅನ್ನೋದು ನಮ್ಮ ಪಾಲಿಸಿ.

ಮನೆ ಬಿಟ್ಟು ಕರೆದೊಯ್ದವನು ಕಡೆಗೆ ಇದೇನು ಮಾಡಿದ?

ಪಕ್ಕದ ಮನೆಯವನು ಅನ್ನೋ ಕಾರಣಕ್ಕೆ ಸಲುಗೆ ಬೆಳೆಯಿತು, ಪ್ರೀತಿ ಮೊಳಕೆಯೊಡೆಯಿತು. ಮನೆಯವರು ಒಪ್ಪಲಿಲ್ಲ ಅಂತ ಅವನ ಜೊತೆ ಮುಂಬೈಗೆ ಓಡಿಹೋದದ್ದೂ ಆಯಿತು. ಆದರೆ ಅಲ್ಲಿ ಕೆಲಸ ಸಿಗಲಿಲ್ಲ. ಅವನು ಈಕೆಯನ್ನು ನಡುದಾರಿಯಲ್ಲಿ ಕೈಬಿಟ್ಟು ಓಡಿಬಂದ. ಅವಳ ಗತಿಯೇನಾಯಿತು, ಈಗಾಕೆ ಎಲ್ಲಿದ್ದಾಳೆ, ಏನು ಮಾಡುತ್ತಿದ್ದಾಳೆ, ರಣಹೇಡಿ ಪ್ರೇಮಿ ಎಲ್ಲಿ ಹೋದ? ಸಮಾಧಾನ ಅಂಕಣದಲ್ಲಿ ನೊಂದ ಹುಡುಗಿಯ ಪತ್ರವಿದೆ, ರವಿ ಬೆಳಗೆರೆ ಅವರ ಉತ್ತರವೂ ಇದೆ.

ತಂದೆತಾಯಿ ದೇವರಲ್ಲ ಅಂತಾರೆ ಜಾನಕಿ

ನಮಗೆ ಬೆರಳು ಮಾಡಿ ತೋರಿಸುವುದೊಂದು ಚಟ. ಚಂದ್ರನಿಗೂ ತೋರುಬೆರಳು, ಇಂದ್ರನಿಗೂ ತೋರುಬೆರಳು. ತಪ್ಪಿಗೂ ಬೆರಳು, ಒಪ್ಪಿಗೂ ಬೆರಳು. ದೋಷಕ್ಕೂ ರೋಷಕ್ಕೂ ಪ್ರೀತಿಗೂ ಮದುವೆಗೂ ಬೆರಳು. ಆ ಬೆರಳನ್ನೇ ಕತ್ತರಿಸಿ ಎಸೆದರೆ! ತಂದೆತಾಯಿ ಮಾಡಬೇಕಾದ್ದು ಅದನ್ನೇ ಅಲ್ಲವೇ? ನಮ್ಮತ್ತ ನಾವು ಬೆರಳು ಮಾಡಿಕೊಳ್ಳಬೇಕು. ಬೇರೆಯವರತ್ತ ತೋರಿಸುವ ಬೆರಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಎಸೆಯಬೇಕು. ಯಾಕೆಂದರೆ ಯಾವುದಕ್ಕೂ ಯಾರೂ ಹೊಣೆಯಲ್ಲ. ಯಾವುದಕ್ಕೆ ಯಾರೂ ಕಾರಣರಲ್ಲ. ನಿನಗೆ ನೀನೇ ಗೆಳೆಯ. ಈ ಸಂಚಿಕೆಯಿಂದ ಜಾನಕಿಯ ಹೊಸ ಅಂಕಣ ಶುರು.buy-books-online-colour

ಅವನು, ಕೊಳಲು ಮತ್ತು ನಾನು

ಅವನ ಸುತ್ತಲೂ ಹುಲ್ಲುಹಾಸು ಮಂತ್ರ ಮುಗ್ಧಗೊಂಡು ಕುಳಿತಿರಬೇಕು. ಗಿಡಮರಗಳೂ ಗಪ್ಚುಪ್ ನಿಂತಿವೆ. ಯೋಗ ಮಾಡುವವರು, ಯೋಗ ಮುಗಿಸಿ ಚಪ್ಪಾಳೆ ತಟ್ಟುವುದರಲ್ಲಿ, ದೊಡ್ಡದಾಗಿ ನಗುವ ಲಾಫ್ಟರ್ ಯೋಗದಲ್ಲಿ ಮೈಮರೆತಿದ್ದರೆ ಈ ಕೊಳಲು ತನ್ನ ಪಾಡಿಗೆ ತಾನು ನುಡಿಯುತ್ತಿದೆ. ಅದೇ ಅವನ ಯೋಗ, ಧ್ಯಾನ ಎಲ್ಲವೂ. ಅದೇ ಧ್ಯಾನದಲ್ಲಿ ಧ್ಯಾನಸ್ಥ ಅವನು. ಇಲ್ಲಿ ಅವನ ಕೊಳಲಿನ ನಾದದ ಮೋಹದಲ್ಲಿ ನಾನು. ಮುರಳಿಯ ನಾದಕ್ಕೆ, ಮುರಳಿಧರನ ವ್ಯಕ್ತಿತ್ವಕ್ಕೆ ಮನಸೋತ ರೇಣಕಾ ನಿಡಗುಂದಿಯವರ ಭಾವ ಲಹರಿ ಇಲ್ಲಿದೆ

ಇವೆಲ್ಲಾ ಲೇಖನಗಳ ಜೊತೆ ಎಂದಿನಂತೆ ಪುರಾಣಪ್ರಪಂಚ, ಹಸನ್ಮುಖಿ, ಚೈತನ್ಯದ ಚಿಲುಮೆ, ರೀಡರ್ಸ್ ಡೈಜೆಸ್ಟ್ , ಲಾ ಪಾಯಿಂಟು ವಾಟ್ಸ್ ಅಪ್, ಸಿಂಪಲ್ ಸಯನ್ಸ್ ಮೊದಲಾದ ಜನಪ್ರಿಯ ಅಂಕಣಗಳೂ ಇವೆ. ಬುದ್ಧಿ ಭಾವಗಳ ಹದವಾದ ಸಂಗಮವಾಗಿ ಈ ಬಾರಿಯ ಓ ಮನಸೇ ರೂಪುಗೊಂಡು ಮಾರುಕಟ್ಟೆಯಲ್ಲಿದೆ. ಕಣ್ಣಿಗೆ ಒತ್ತಿಕೊಳ್ಳಿ.

106th Issue Highlights

೧೦೬ನೇ ಸಂಚಿಕೆಯ ವೀಡಿಯೋ ಹೈಲೇಟ್ಸ್… 

Omanase-106-video

 

ನಿಮ್ಮ ಲೈಫು ಸೆಟ್ಲ್ ಆಯ್ತಾ?

ತಲೆಮೇಲೆ ಗಟ್ಟಿಸೂರು, ಪಕ್ಕದಲ್ಲಿ ಚಂದದ ವೈಫು, ಅಷ್ಟಕ್ಕೇ ನಮ್ಮ ಲೈಫ್ ಸೆಟ್ಲಾಗೋಯ್ತು ಅಂತ ಅಂದುಕೊಳ್ಳಬಹುದಾ? ಊಹೂಂ. ಮಗನನ್ನು ಓದಿಸಬೇಕು, ಮಗಳ ಮದುವೆ ಮಾಡಬೇಕು, ಬ್ಯಾಂಕಿಗೆ ಸಾಲದ ಕಂತು ಕಟ್ಟಬೇಕು, ಸೋ, ವಯಸ್ಸು ಐವತ್ತೈದು ದಾಟಿದರೂ ಈಸಿಚೇರಲ್ಲಿ ಕುಳಿತು ಕಾಲುಚಾಚುವ ಹಾಗಿಲ್ಲ.  ದುಡೀಲೇಬೇಕು, ದುಡಿದುಡಿದು ಮಡಿಯಲೇಬೇಕು. ಅರುವತ್ತಕ್ಕೆ ಇದ್ದೇ ಇದೆಯಲ್ಲಾ ಮುಖೇಶನ ಹಾಡು- ಜೀನಾ ಯಹಾಂ ಮರ್ ನಾ ಯಹಾಂ…ಮಹಾನಗರಿಗಳಲ್ಲಿ ಲೈಫ್ ಸೆಟ್ಲ್ ಮಾಡಿಕೊಳ್ಳುವುದಕ್ಕೆ ಶಟ್ಲ್  ಹೊಡೆಯುತ್ತಿರುವ ಹೋರಾಟಗಾರರ ಕತೆಯಿದು. ಅತಂತ್ರ ಬದುಕಿನ ಕುತಂತ್ರಗಳನ್ನು ಕೊಂಚ ವಿಷಾದಬೆರೆತ ಧಾಟಿಯಲ್ಲಿ ಬರೆದಿದ್ದಾರೆ ರೇಣುಕಾ.

 ಬ್ರೇಕಪ್ ಆದ್ಮೇಲೊಂದು ಫ್ರೆಂಡ್ ಶಿಪ್

sweet-couple-first-loveಪ್ರೀತಿ ಮಾಡಿದ್ದಾಯ್ತು, ಕೈಕೈಹಿಡಿದು ಊರೂರು ಸುತ್ತಿದ್ದಾಯ್ತು, ಭವಿಷ್ಯದ ಬಗ್ಗೆ ಸಾವಿರ ಕನಸುಗಳನ್ನು ಹೆಣೆದಿದ್ದೂ ಆಯ್ತು. ಕೊನೆಗೊಂದು ದಿನ ಇಬ್ಬರಿಗೂ ಇಬ್ಬರೂ ಬೋರಾಗಿ ಬ್ರೇಕಪ್ ಎಂದು ಘೋಷಿಸಿದ್ದಾಯ್ತು. ಮತ್ತೆರಡು ವರ್ಷ ಅವರಿಬ್ಬರೂ ದೂರ ದೂರ. ಆದರೆ ಒಂದಿಷ್ಟು ವರ್ಷ ಜೊತೆಯಾಗಿ ಕಾಲಕಳೆದಿದ್ದ ನೆನಪುಗಳು ಅಷ್ಟು ಬೇಗ ಸಾಯುವುದಿಲ್ಲ. ಪ್ರೀತಿಗೀತಿ ಬೇಡ, ಹಲೋ ಅನ್ನುವುದಕ್ಕೇನಂತೆ ಎಂಬ ಚಿಕ್ಕ ಕಾಂಪ್ರಮೈಸ್ ನೊಂದಿಗೆ ಮತ್ತೆ ಫ್ರೆಂಡ್ ಶಿಪ್ ಶುರುವಾಗುತ್ತದೆ. ಅದು ಮತ್ತೆ ಇಬ್ಬರನ್ನೂ ಒಂದುಗೂಡಿಸಬಹುದಾ? ಒಂದಾದರೂ ಆ ಸಂಬಂಧ ಬಾಳಿಕೆ ಬರಬಹುದಾ?  ಈ ಲೇಖನ ಓದಿದರೆ ಉತ್ತರ ಸಿಗುತ್ತದೆ.

 ಖಾಲಿಪೀಲಿ ರೂಮರುಗಳಿಗೆ ಮಕ್ಕಳಾಗುತ್ತವೆ!

ಗಾಂಧಿಯನ್ನು ಕೊಂದ ಗೋಡ್ಸೆ ಮಹಾನ್ ದೇಶಭಕ್ತ ನಿಜ, ಆದರೆ ದಾರಿತಪ್ಪಿದ ದೇಶಭಕ್ತ. ಇಂಥಾ ಅತಿರೇಕಿಗಳು ಈಗ ನಾನಾ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಸ್ಲಿಂ ಉಗ್ರಗಾಮಿಗಳು, ನಕ್ಸಲೀಯರು, ಎಲ್ ಟಿಟಿಇಗಳು, ಅಷ್ಟೇಕೆ ಹುಚ್ಚುಪ್ರೇಮಿಗಳಲ್ಲೂ ಇವರು ಅವಿತುಕೊಂಡಿದ್ದಾರೆ. ಅಂಥವರ ಮನೋಸ್ಥಿತಿಯ ಬಗ್ಗೆ ಈ ಬಾರಿಯ ‘ಮನಸಿನ್ಯಾಗಿನ ಮಾತು’ ಅಂಕಣದಲ್ಲಿ ರವಿ ಬೆಳಗೆರೆ ಬರೆದಿದ್ದಾರೆ.

 ಮಂಜಿನ ಮುಸುಕಿನಲ್ಲೇ ಅರಳುವುದು ಪ್ರೇಮ

ಬೆಂಗಳೂರಲ್ಲಿ ಚಳಿ ಈಗಷ್ಟೇ ಚುರ್ ಅಂತಿದೆ, ಆದರೆ ದೆಹಲಿಯಲ್ಲಿ ಅದು ಈಗಾಗಲೇ ಕ್ಲೈಮಾಕ್ಸ್ ತಲುಪಿದೆ. ಸುಖಾಸುಮ್ಮನೆ ಒಂಟಿತನವನ್ನೂ, ಬೇಸರಿಕೆಯನ್ನೂ, ವಿರಹವನ್ನೂ ಕರುಣಿಸುವ ಚಳಿಯ ಬಗ್ಗೆ ದೆಹಲಿಯಿಂದ ರೇಣುಕಾ ನಿಡಗುಂದಿ ಒಂದು ಪದ್ಯದಂಥ ಗದ್ಯ ಬರೆದಿದ್ದಾರೆ. ಚಳಿಯೆಂದರೆ ಅವರ ಪಾಲಿಗೆ ಕೇವಲ ಹವಾಮಾನವಲ್ಲ, ಪ್ರೇಮದ ಋತುಮಾನ, ಅದೊಂದು ಗಝಲ್, ಚಹಾ ಪೇ ಚರ್ಚಾ ಮಾಡುವುದಕ್ಕೆ ಸೊಗಸಾದ ಕಾಲ, ಪ್ರೇಮಿಗಳ ಏಕಾಂತಕ್ಕೆ ಆ ದೇವರೇ ಕರುಣಿಸಿದ ಒಂದು ದಿವ್ಯ ಉಡುಗೊರೆ.

buy-books-online

ಹೊಸವರ್ಷಕ್ಕೆ ನಿಮ್ಮ ಸಂಕಲ್ಪ

ಹೊಸವರ್ಷಕ್ಕೆ ನಿಮ್ಮ ಹೊಸ ಶಪಥವೇನು ಎಂದು ‘ಓ ಮನಸೇ’ ಓದುಗರಿಗೆ ನಾವು ಕೇಳಿದ ಪ್ರಶ್ನೆಗಳಿಗೆ ಥರಾವರಿ ಉತ್ತರಗಳು ಬಂದಿವೆ. ಸಿಗರೇಟು ಬಿಡ್ತೀನಿ, ಗುಂಡು ಹಾಕೋಲ್ಲ, ಹೆಂಡತಿ ಜೊತೆ ಇರ್ತೀನಿ ಅನ್ನುವ ನಿರೀಕ್ಷಿತ ಪ್ರತಿಜ್ಞೆಗಳ ಜೊತೆ ಹಸುಸಾಕಿ ಹಾಲು ಮಾರ್ತೀನಿ ಅನ್ನುವ ವಿಶಿಷ್ಟ ಯೋಜನೆಗಳೂ ಇವೆ.

 ಏನೇನೋ ತಿಂದಾಯ್ತು, ಈಗ ಏಟು ತಿನ್ನಿ

Arvind Kejriwal2PTIರಾಜಕಾರಣಿಗಳು ಚುನಾವಣಾ ಪ್ರಚಾರಕ್ಕೆ ಬಂದಾಗ ಬೇಸತ್ತ ಜನರು ಟೊಮೆಟೋ ಎಸೆಯುವುದು ಕಾಮನ್ನು. ಆದರೆ ರಾಜಕಾರಣಿಯ ಕೆನ್ನೆಗೆ ಫಟೀರ್ ಅಂತ ಬಾರಿಸುವುದು ಈಗಿನ ಟ್ರೆಂಡು. ಹೀಗೇ ಹೊಡೆಯುವುದು ಈ ದೇಶದ ಕೊಳಕು ರಾಜಕಾರಣವನ್ನು ತೊಳೆಯುವುದಕ್ಕೆ ಇರುವ ಶಾರ್ಟ್ ಕಟ್ಟಾ? ಇದು ಹೊಡೆದವರು ಮತ್ತು ಹೊಡೆಸಿಕೊಂಡವರ ಕತೆ.

ಅದೆಷ್ಟು ಸಲ ಅವಳಿಗೆ ಗಿಫ್ಟ್ ಕೊಟ್ಟೆ ಗೊತ್ತಾ?

ಅವಳು ಸಿಕ್ಕಾಗಲೆಲ್ಲಾ ಅವನು ಪ್ರೇಮದ ಕಾಣಿಕೆ ಕೊಡುತ್ತಲೇ ಇದ್ದ, ಅವಳು ಕಾಣಿಕೆ ತೆಗೆದುಕೊಂಡಳು, ಆದರೆ ಪ್ರೀತಿಯನ್ನು ಸ್ವೀಕರಿಸಲಿಲ್ಲ. ಗಿಫ್ಟ್ ಕೊಟ್ಟು ಪ್ರೀತಿಯನ್ನು ಖರೀದಿಸಬಹುದಾ? ಪ್ರೀತಿಗೆ ಒಲ್ಲೆ ಅಂದವಳು ಗಿಫ್ಟನ್ನು ಮಾತ್ರ ತೆಗೆದುಕೊಳ್ಳುವುದು ನ್ಯಾಯಾನಾ? ಗಿಫ್ಟೆಡ್ ಪ್ರೇಮಿಗೆ ‘ಸಮಾಧಾನ’ ಅಂಕಣದಲ್ಲಿ ಒಂದು ಖಡಕ್ ಉತ್ತರವಿದೆ.

pun ಮಾಡೋದು ಅಂದ್ರೆ Fun ಮಾಡೋದಲ್ಲ

bad_pun_85_by_ditistomzelf-d5oihemಇರಾನ ಅಂದ್ರೆ ಇರಾಕ್ ಬಿಡಾಕಿಲ್ಲ. ಇದು ಪತ್ರಕರ್ತ ವೈಎನ್ಕೆ ಅವರ ಫೇಮಸ್ ಪನ್. ಒಂದೇ ಪದ ಎರಡು ಅರ್ಥಗಳನ್ನು ನೀಡುವ ಚಮತ್ಕಾರವನ್ನು ಪನ್ ಅಂತಾರೆ. ಇಂಥಾ ಪನ್ ಲೋಕದೊಳಗೊಂದು ಸುತ್ತು ಹಾಕಿ punಡಿತರ ಜಾತಕ ಜಾಲಾಡಿದ್ದಾರೆ ಚಕ್ರವಾಕ. ತುಂಬಾ ಇಂಟೆರೆಸ್ಟಿಂಗ್ ಆಗಿದೆ ಓದಿರಿ.

ಇವೆಲ್ಲಾ ಲೇಖನಗಳ ಜೊತೆ ಎಂದಿನಂತೆ ಪುರಾಣಪ್ರಪಂಚ, ಆಚಾರವಿಚಾರ, ಹಸನ್ಮುಖಿ, ಚೈತನ್ಯದ ಚಿಲುಮೆ, ರೀಡರ್ಸ್ ಡೈಜೆಸ್ಟ್ , ಲಾ ಪಾಯಿಂಟು ವಾಟ್ಸ್ ಅಪ್, ಸಿಂಪಲ್ ಸಯನ್ಸ್ ಮೊದಲಾದ ಜನಪ್ರಿಯ ಅಂಕಣಗಳೂ ಇವೆ. ‘ಓ ಮನಸೇ’ ಓದಿರಿ, ಮನಸ್ಸು ಹಗುರ ಮಾಡಿಕೊಳ್ಳಿ.

SMS

 

 

 

 

ಪ್ರೇಮಿಗಳ ದಿನಕ್ಕೆ ‘ಓ ಮನಸೇ’ ಸ್ಪೆಷಲ್

ಮೊದಲ ಪ್ರೇಮಪತ್ರ

‘ಮೊದಲ ಪ್ರೇಮಪತ್ರವೇ ಹೃದಯಗಳಿಗೆ ಸೇತುವೆ
ಮೊದಲ ಪ್ರಣಯ ಪತ್ರವೇ ಕನಸುಗಳಿಗೆ ಸೇತುವೆ’

ಎಂದು ಬರೆದರು ಪ್ರೇಮಕವಿ ಕಲ್ಯಾಣ್. ಕಣ್ಣುಗಳ ಮಿಲನದಿಂದ ಆರಂಭವಾಗುವ ಪ್ರೇಮಕತೆಯ ಮಧ್ಯಂತರವೆಂದರೆ ಪ್ರೇಮಪತ್ರ. ಆಮೇಲೆ ಏನು ಬೇಕಾದರೂ ಆಗಬಹುದು. ಅವಳು ಆ ಪ್ರೇಮಪತ್ರವನ್ನು ಆತನೆದುರೇ ಹರಿದು ಚೂರು ಮಾಡಿ ಎಸೆದು ಬಿರಬಿರನೆ ನಡೆದುಹೋಗಬಹುದು, ಕಪಾಳಮೋಕ್ಷ ಮಾಡಬಹುದು, ಪತ್ರವನ್ನು ನೇರವಾಗಿ ಅಪ್ಪನ ಕೈಗೆ ಕೊಡಬಹುದು, ಅಥವಾ ಇನ್ನೊಂದು ಪತ್ರ ಬರೆದು ಗ್ರೀನ್ ಸಿಗ್ನಲ್ ಕೊಡಬಹುದು. ಸಿನಿಮಾದಲ್ಲಾದರೆ ಒಂದು ಡ್ಯುಯೆಟ್ ಹಾಜರಾಗುವ ಸಮಯವದು. ಅನಾದಿಕಾಲದಲ್ಲಿ ನೋಟ್ಸ್ ಬುಕ್ ನಡುವೆ ಪ್ರೇಮಪತ್ರವನ್ನಿಟ್ಟು ಆಕೆಗೋ ಆತನಿಗೋ ನೀಡಲಾಗುತ್ತಿತ್ತು. ಆಕೆಯ ಗೆಳತಿಯ ಮೂಲಕ ಪತ್ರವನ್ನು ತಲುಪಿಸುವುದು ಇನ್ನೊಂದು ವಿಧಾನ.love

ಇವೆಲ್ಲ ಹಳೆಯ ಕತೆ. ಆವಾಗ ಪ್ರೇಮಪತ್ರ ಬರೆಯುವುದನ್ನೂ ಒಂದು ಕಲೆ ಎಂದು ಪರಿಗಣಿಸಲಾಗುತ್ತಿತ್ತು. ಈಗ ಯಾರೂ ಪತ್ರ ಬರೆಯುವುದಿಲ್ಲ, ಯಾಕೆಂದರೆ ಯಾರೂ ಪೆನ್ನು ಹಿಡಿಯುವುದಿಲ್ಲ. ಅವರ ಕೈಗೆ ಮೊಬೈಲ್ ಬಂದಿದೆ, ಮಡಿಲಲ್ಲಿ ಲ್ಯಾಪ್ ಟಾಪ್ ಕುಳಿತಿದೆ, ಈಮೇಲ್ ಮಾಡಬಹುದು, ಎಸ್ಸೆಮ್ಮೆಸ್ಸಲ್ಲೇ ಪ್ರಪೋಸ್  ಮಾಡಬಹುದು, ಫೇಸ್ ಬುಕ್ಕಲ್ಲಿ ಐ ಲವ್ ಯೂ ಅಂತ ಮೆಸೇಜ್ ಹಾಕಬಹುದು, ವಾಟ್ಸಾಪ್ ನಲ್ಲಿ ಪ್ರೇಮನಿವೇದನೆಯ ಫೋಟೋ ಕಳಿಸಬಹುದು. ಹಾಗಾಗಿ ಐದಾರು ಪುಟಗಳ ಪ್ರೇಮಕತೆ ಈಗ ಅರ್ಧಪೇಜಲ್ಲೇ ಮುಗಿದುಹೋಗುತ್ತದೆ.

ಆದರೆ ಇಂದಿನ ಪೀಳಿಗೆಗೆ ಪ್ರೇಮಪತ್ರಗಳ ಮಹತ್ವ ಅರಿವಾಗಬೇಕು. ಆ ಪತ್ರದಲ್ಲಿರುವ ಸಾಹಿತ್ಯ ಹೇಗಿರುತ್ತದೆ ಅನ್ನೋದು ಗೊತ್ತಾಗಬೇಕು. ಈ ಕಾರಣಕ್ಕಾದರೂ ನೀವೀಗ ಅಮರಪ್ರೇಮಿಯ ವೇಷ ಧರಿಸಬೇಕು.  ಪೋಸ್ಟ್ ಮಾಡದೇ ಉಳಿದ ಪತ್ರ, ವಿಳಾಸ ಬರೆಯದೇ ಪೋಸ್ಟ್ ಮಾಡಿದ ಪತ್ರ, ವಿಳಾಸ ಸಿಗದೇ ವಾಪಸಾದ ಪತ್ರ,  ಬರೆಯದೇ ಉಳಿದ ಪತ್ರ, ಮದುವೆಯಾದ ಮೇಲೆ ಹಳೇ ಟ್ರಂಕಲ್ಲಿ ಬಚ್ಚಿಟ್ಟ ಮಾಜಿಪ್ರೇಮಿಯ ಪತ್ರ, ಅಟ್ಟದ ಕತ್ತಲಲ್ಲಿ ಕರಗಿಹೋಗಿರುವ ಪತ್ರ…ಈ ಪೈಕಿ ಯಾವುದಾದರೂ ಒಂದು ಪತ್ರವನ್ನು ನಮಗೆ ಕಳಿಸಿಕೊಡಿ. ಇದು ನಿಮ್ಮ ಮೊದಲಪತ್ರವಾಗಿರಬೇಕು ಹಾಗೂ 150 ಪದಗಳ ಒಳಗೆ ನಿಮ್ಮ ಪ್ರೇಮ ಅಡಕವಾಗಿರಬೇಕು.

ಫೆಬ್ರವರಿ 14ರಂದು ‘ಪ್ರೇಮಿಗಳ ದಿನ’ ಅನ್ನುವುದು ನಿಮಗೆ ನೆನಪಿರಬಹುದು. ಹಾಗಾಗಿ ಫೆಬ್ರವರಿ 1-15ನೇ ‘ಓ ಮನಸೇ’ ಸಂಚಿಕೆಯಲ್ಲಿ ನೀವು ಬರೆದ ಪ್ರೇಮಪತ್ರಗಳು ಪ್ರಕಟವಾಗಲಿವೆ. ಪತ್ರಗಳು ಈಮೇಲ್ ಮೂಲಕ ಬಂದರೆ ಅನುಕೂಲ. ನಿಮ್ಮ ಪತ್ರ ನಮ್ಮ ಕೈಸೇರಬೇಕಾದ ಕೊನೆಯ ದಿನಾಂಕ –  ಜನವರಿ 23. ಕಳಿಸಬೇಕಾದ ಈಮೇಲ್ ವಿಳಾಸ omanase@ravibelagere.com

ಈ ಕೆಳಗಿನ Form ಮೂಲಕವೂ ನಿಮ್ಮ ಪತ್ರಗಳನ್ನು ಕಳಿಸಬಹುದು.

ಪ್ರೇಮ ಪತ್ರ

 

Verification

105th Issue Highlights

both-cover-105-small

ಬಲಗಾಲಿಟ್ಟು ಒಳಗೆ ಬನ್ನಿ

ಹಳೆಯ ಗೋಡೆ, ಅಷ್ಟೇ ಹಳೇ ಮೊಳೆ. ಕ್ಯಾಲೆಂಡರ್ ಮಾತ್ರ ಹೊಸದು. ಅದೇ ಹೆಂಡ್ತಿ, ಅದೇ ಗಂಡ, ಅದೇ ಜೀವ, ಅದೇ ಭಾವ, ಈ ಬದುಕಲ್ಲೇನಿದೆ ಹೊಸದು? ಹಾಗಂತ ನಿರಾಶಾವಾದಿಗಳಾಗದೇ ಇರಿ, ನಿಮಗೇ ನೀವೇ ಒಂದಿಷ್ಟು ಠರಾವುಗಳನ್ನು ಪಾಸು ಮಾಡಿಕೊಳ್ಳಿ. ಬದಲಾದ ಕಾಲದ ಜೊತೆ ನಾನೂ ಬದಲಾಗುತ್ತೇನೆ ಅನ್ನುವ ಸಂಕಲ್ಪ ಮಾಡಿ. ಫಾರ್ ಎ ಚೇಂಜ್ ಮನಸ್ಸಿನ ಮಾತು ಕೇಳಿ. 2015ಕ್ಕೆ ಒಂದಿಷ್ಟು ‘ಭೀಷ್ಮಪ್ರತಿಜ್ಞೆ’ಗಳನ್ನು ಮಾಡಿಕೊಳ್ಳಿ. ನಿಮ್ಮ ವಯಸ್ಸಿಗೆ ತಕ್ಕಂತೆ, ನಿಮ್ಮ ಉದ್ಯೋಗಕ್ಕೆ ತಕ್ಕಂತೆ, ಏನೆಲ್ಲಾ ಪ್ರತಿಜ್ಞೆಗಳನ್ನು ಮಾಡಬಹುದು ಅನ್ನುವ ಬಗ್ಗೆ ನಮ್ಮ ಭೀಷ್ಮ ರೋಹಿತ್ ಒಂದಿಷ್ಟು ಐಡಿಯಾಗಳನ್ನು ಎಸೆದಿದ್ದಾರೆ. ಪ್ರಾಕೃತಿಕ ವಿಕೋಪದಿಂದಾಗಿ, ಪರಿಸ್ಥಿತಿಯ ಪಿತೂರಿಯಿಂದಾಗಿ ಈ ಐಡಿಯಾಗಳಲ್ಲಿ ಅರ್ಧಕ್ಕರ್ಧ ವರ್ಕೌಟ್ ಆಗದೇ ಇರಬಹುದು. ಆದರೆ ಪ್ರತಿಜ್ಞೆ ಮಾಡೋದಕ್ಕೇನು ಕಾಸು ಕೊಡಬೇಕಾಗಿಲ್ವಲ್ಲ. ತಡ ಯಾಕೆ, ಈಗಿಂದೀಗಲೇ ಶುರು ಹಚ್ಚಿಕೊಳ್ಳಿ. ಅದಕ್ಕೆ ಮುಂಚೆ ‘ಓ ಮನಸೇ’ಯ ಅಗ್ರಲೇಖನ ಓದಿ – ಭೀಷ್ಮಪ್ರತಿಜ್ಞೆ.

• ರಾಜ್ಯವೆರಡು ಜೀವವೊಂದು

article-201441073052211122000ಯಾವುದೋ ರಾಜ್ಯಕ್ಕೆ ಬಂದ ಯಾವುದೋ ರಾಜ್ಯದ ಕುವರಿ. ಅವಳನ್ನು ಮೆಚ್ಚಿದ ಮತ್ತೊಂದು ರಾಜ್ಯದ ಕುವರ. ಅವರಿಬ್ಬರ ನಡುವೆ ಪ್ರೇಮದ ರಾಜ್ಯಭಾರ. ಭಾಷೆ, ಸಂಸ್ಕೃತಿ, ಆಚಾರ-ವಿಚಾರ ಎಲ್ಲವೂ ಬೇರೆಯಾಗಿರುವ ಇವರಿಬ್ಬರ ಪ್ರೀತಿಗೆ ಹಿರಿಯರು ಅಕ್ಷತೆ ಹಾಕಿ ಆಶೀರ್ವಾದ ಮಾಡುತ್ತಾರೆ. ಇದು ಟೂ ಸ್ಟೇಟ್ಸ್ ಸಿನಿಮಾದ ಕತೆಯಷ್ಟೇ ಅಲ್ಲ. ನಮ್ಮ ಮಧ್ಯೆಯೇ ನಡೆಯುತ್ತಿರುವ ರಿಯಲ್ ಲವ್ ಸ್ಟೋರಿ. ನಿಮ್ಮ ಪ್ರೀತಿಗೆ ಸ್ಫೂರ್ತಿಯಾಗುವ ಒಂದಿಷ್ಟು ನೈಜ ಕತೆಗಳನ್ನು ಓದಿ ಆನಂದಿಸಿರಿ.

• ಅವರ ಹಾಡು – ನನ್ನ ಪಾಡು

‘ಕಿಸೇದಾಗ ಒಂದಿಷ್ಟು ಪೆಪ್ಪರಮಿಂಟು, ಎದುರಿಗೆ ಒಂದು ಹೂತ ಹುಣಿಸೇಮರ ಇದ್ದರೆ ಅದೇ ನಂಗೆ ಸ್ಫೂರ್ತಿ’ ಎಂದ ಬೇಂದ್ರೆಯವರಿಂದ ಹಿಡಿದು, ‘ಯಾವ ಸುಮಧುರ ಯಾತನೆ, ಯಾವ ದಿವ್ಯದ ಯಾಚನೆ’ ಎಂದ ಅಡಿಗರ ತನಕ ನಮ್ಮ ಪ್ರಾತಃಸ್ಮರಣೀಯ ಕವಿಗಳ ಬದುಕಿನ ಸ್ವಾರಸ್ಯಕರ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ ರವಿ ಬೆಳಗೆರೆ. ಅದು ‘ಮನಸಿನ್ಯಾಗಿನ ಮಾತು’.sudeendra-haldoderi

• ಯಾರ ಮನಸಲಿ ಹೇಗೆ ಒಳಗೆ ನಿಂತೆ?

ಇದೊಂದು ಬ್ರೇಕಿಂಗ್ ನ್ಯೂಸ್. ಇನ್ನು ಕೆಲವೇ ವರ್ಷಗಳಲ್ಲಿ ನಮ್ಮೆಲ್ಲರ ಮನಸಿನೊಳಗಿನ ತುಮುಲಗಳನ್ನು ಅರ್ಥ ಮಾಡಿಕೊಳ್ಳುವ ಯಂತ್ರಗಳು ಬರಲಿವೆ. ಆಮೇಲೆ ಸಿನಿಮಾಗಳಲ್ಲಿ ಭಗ್ರಪ್ರೇಮಿಗಳೇ ಇರುವುದಿಲ್ಲ. ಯಾಕೆಂದರೆ ನಾಯಕಿಯ ಮಿದುಳಿನೊಳಗಿನ ಚಿಪ್ ನಲ್ಲಿ ಏನೆಲ್ಲ ನಡೆಯುತ್ತಿದೆ ಅನ್ನುವುದನ್ನು ನಾಯಕನ ಅಂಗೈ ಗಣಕ ಗ್ರಹಿಸುತ್ತದೆ. ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಕಂಪ್ಯೂಟರ್ ಚಿಪ್ ಅವಿಷ್ಕಾರಗೊಳ್ಳುವ ಸಾಧ್ಯತೆಗಳ ಬಗ್ಗೆ ರೋಚಕ ವಿವರಗಳನ್ನು ನೀಡುತ್ತಾರೆ ವಿಜ್ಞಾನಿ ಮತ್ತು ಪ್ರಸಿದ್ಧ ಲೇಖಕ ಹಾಲ್ದೋಡ್ಡೇರಿ ಸುಧೀಂದ್ರ.

• ಅಡ್ರೆಸ್ಸಿಲ್ಲದ ಪತ್ರಕ್ಕೊಂದು ಶ್ರದ್ಧಾಂಜಲಿ
ನಾವೀಗ ಪ್ರೇಮಪತ್ರಗಳನ್ನು ಬರೆಯುವುದಿಲ್ಲ, ಯಾಕೆಂದು ನಿಮಗೂ ಗೊತ್ತು. ಪ್ರೇಮಪತ್ರ ಬರೆಯುವುದು, ಓದುವುದು, ಅದಕ್ಕಾಗಿ ಕಾಯುವುದು, ಇವೆಲ್ಲವೂ ಒಂದು ಧ್ಯಾನದಂಥ ಸುಖ. ಪತ್ರ ಬರೆಯಬೇಕೆಂದರೆ ಒಂದು ಏಕಾಂತ ಬೇಕು. ಯಾರಿಗೆ ಬರೆಯುತ್ತೇವೋ ಅವರು ಮನಸ್ಸಲ್ಲಿ ತುಂಬಿರಬೇಕು. ಅದರಲ್ಲಿ ಬರೆಯುವ ಒಂದೊಂದು ಪದದಲ್ಲ ಪ್ರೇಯಸಿಯ ಮೈಯ ಗಂಧವಿರುತ್ತದೆ. ಇಂಥ ಪತ್ರಗಳ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸುತ್ತಾ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ ಮಹಾಶ್ವೇತ. ಇದನ್ನು ಓದಿದ ಮೇಲೆ ನೀವು ಮೊಬೈಲ್ ಬಿಸಾಕಿ ಪೆನ್ನು ಹಿಡಿಯುವುದು ಗ್ಯಾರಂಟಿ.

buy-books-online-colour

• ಕ್ಯಾಲೆಂಡರಿನ ಪುಟಗಳಡಿ ಎಷ್ಟೊಂದು ಕತೆಗಳು…
ನಾವು ಎಲ್ಲವನ್ನೂ ರೀಮೇಕು ಮಾಡುವ ಥರ ಹೊಸವರ್ಷವನ್ನೂ ರೀಮೇಕು ಮಾಡಿದ್ದೇವೆ. ಭಾರತದಲ್ಲಿ ಹಿಂದೆ ಕ್ಯಾಲೆಂಡರ್ ಪದ್ಥತಿ ಇರಲಿಲ್ಲ. ಇದಕ್ಕೆ ಹೋಲಿಸಿದರೆ ಭಾರತೀಯ ಕಾಲನಿರ್ಣಯ ಅತ್ಯಂತ ಸಂಕೀರ್ಣ ಮತ್ತು ಸುಂದರ. ಎರಡೆರಡು ಮಾಸಗಳನ್ನು ಜೊತೆಮಾಡಿ ಋತುಗಳನ್ನು ಗುರುತಿಸುವ ಕೆಲಸವೂ ಆಗಿದೆ. ಈ ಆರುಋತುಗಳನ್ನು ವರ್ಣಿಸುವ ಕಾಳಿದಾಸನ ಋತುಸಂಹಾರದ ಮುಂದೆ ಹ್ಯಾಪಿ ನ್ಯೂ ಇಯರ್ ಅನ್ನುವ ಪದ ಪೇಲವ.

• ನಾನು ಮಾಡಿದ್ದು ಸರಿಯಲ್ಲವೇ ಅಂಕಲ್
ಅವನನ್ನು ಗಂಡ ಎಂದು ಒಪ್ಪಿಕೊಳ್ಳುವುಕ್ಕೆ ಆಕೆ ತಯಾರಿಲ್ಲ, ಯಾಕೆಂದರೆ ಅವನ ಮೊಬೈಲಲ್ಲಿ ಸಿಕ್ಕ ಹಳೇ ಪ್ರೇಯಸಿಯರ ಮೆಸೇಜುಗಳು. ಅಷ್ಟಕ್ಕೇ ಸಂಸಾರ ಛಿದ್ರವಾಯಿತಾ? ಇಲ್ಲ, ಇನ್ನೇನೇನೋ ಆಗಿಹೋಗಿದೆ. ಹೀಗೆ ನೊಂದವಳ ಪತ್ರಕ್ಕೆ ರವಿ ಬೆಳಗೆರೆ ಸಮಾಧಾನ ಹೇಳಿದ್ದಾರೆ.

• ಅಳುವ ಹುಡುಗಿ ಮತ್ತು ಹಾಡುವ ಹುಡುಗ
ಯಾವ ದುಃಖವನ್ನೂ ಬಹಳ ದಿನ ಒಳಮನೆಯಲಿ ಕೂರಿಸಿಕೊಂಡು ಅನ್ನ ಹಾಕಿ ಆರೈಕೆ ಮಾಡಬಾರದು. ಅದರ ಗೋಣು ಮುರಿದು ಹೂತು, ಅದರ ಗೋರಿಯ ಮೇಲೆ ಹೂಬಳ್ಳಿ ಹಾಕಿ ಚಿಗುರಿಗಾಗಿ ಕಾಯಬೇಕು. ಶಾನು ಬರೆದ ಒಂದು ವಿಶಿಷ್ಟ ವಿಭಿನ್ನ ಕತೆಯಿದು.

• ಮೀರ ಎಂಬ ಮಹಾಜ್ಞಾನಿ
ಅವಳು ಓದಿಲ್ಲ, ಜಾಣೆಯೂ ಅಲ್ಲ. ಅವಳೊಂದು ಹುಚ್ಚು ನದಿಯಂತೆ. ಅವಳ ನಾಲಿಗೆ ಚಾಕುವಿನಷ್ಟೇ ಹರಿತ. ಇಂಥಾ ಕಾರಣಕ್ಕೆ ಮೀರಾಳಂಥವರು ಮಹಾನಗರದಲ್ಲಿ ಕ್ಷೇಮ. ಅವಳಂಥವರ ಬಾಯಿಗೆ ಹೆದರುವ ಗಂಡಸು ಸುತ್ತಮುತ್ತವೂ ಸುಳಿಯಲಾರ. ಯಾರೀಕೆ ಮೀರಾ? ರಾಜಧಾನಿ ಮೇಲ್ ಅಂಕಣ ಓದಿರಿ.

ಬೆಕ್ಕಿಗೆ ಸಾವನ್ನು ಊಹಿಸುವ ಶಕ್ತಿ ಇದ್ಯಾ? (ಸಯನ್ಸ್ ಪೇಜ್ ಓದಿ), ಯಾರೀಕೆ ಭಾನುಮತಿ? (ಪುರಾಣಪ್ರಪಂಚದಲ್ಲಿದೆ ಡೀಟೇಲ್ಸ್), ಮಾರಾಟ ತೆರಿಗೆ ಕಟ್ಟಲೇಬೇಕಾ (ಲಾ ಪಾಯಿಂಟ್ ನಲ್ಲಿದೆ ಉತ್ತರ), ರುದ್ರಾಕ್ಷಿ ರಹಸ್ಯ (ಆಚಾರ ವಿಚಾರ), ಜೊತೆಗೆ ಮನಮಿಡಿಯುವ ಮಿಡಿ ಲೇಖನಗಳು.

ಹೊಸವರ್ಷಕ್ಕೆ ಎರಡು ದಿನ ಮುಂಚಿತವಾಗಿ ‘ಓ ಮನಸೇ’ಯ 105ನೇ ಸಂಚಿಕೆ ಮಾರುಕಟ್ಟೆಗೆ ಬಂದಿದೆ. ಇದನ್ನೇ 2015ರ ಉಡುಗೊರೆ ಎಂದು ಭಾವಿಸಿಕೊಂಡು ಸ್ವೀಕರಿಸಿ. ಹ್ಯಾಪಿ ರೀಡಿಂಗ್.

105ನೇ ಸಂಚಿಕೆಯಲ್ಲೇನಿದೆ? ಇಲ್ಲಿದೆ ನೋಡಿ ವೀಡಿಯೋ.. 

105-video-demo

ಹೊಸವರ್ಷಕ್ಕೆ ನಿಮ್ಮ ಶಪಥ ಏನು?

ಹೊಸವರ್ಷಕ್ಕೆ ನಿಮ್ಮ ಶಪಥ ಏನು?

ನಾವು ಶಪಥವೀರರು ಮತ್ತು ಅಷ್ಟೇ ಮರೆಗುಳಿಗಳು. ‘ತಲೆಮೇಲೆ ತಲೆಬಿದ್ರೂ ಸರಿ, ನಾಳೆಯಿಂದ ನಾನು ಗುಂಡು ಹಾಕೋಲ್ಲ ಗುರೂ’ ಅಂತೀವಿ. ಮಾರನೇ ದಿನ ಸಂಜೆ ಹೊತ್ತಿಗೆ, ಅದೇ ಗುರುವನ್ನು ಅದೇ ಬಾರಲ್ಲಿ ಭೇಟಿಯಾಗಿ ಚಿಯರ್ಸ್ ಅಂತೀವಿ. ಹಿಂದಿನ ದಿನ ಮಾಡಿದ ಶಪಥ ಇತಿಹಾಸದ ಕಸದಬುಟ್ಟಿ ಸೇರುತ್ತದೆ. ‘ನಿನ್ನಾಣೆ, ನಾಳೆಯಿಂದ ನಾನು ಸಿಗರೇಟು ಸೇದೋಲ್ಲ ಕಣೇ’ ಎಂದು ತನ್ನ ಗರ್ಲ್ ಫ್ರೆಂಡ್ ತಲೆಮೇಲೆ ಕೈಇಟ್ಟು ಆಣೆ ಮಾಡುವ ಅಮರಪ್ರೇಮಿ, ಅವಳು ಆಚೆ ಸರಿದ ಕೂಡಲೇ ಜೇಬಲ್ಲಿ ಪ್ಯಾಕಿಗೆ ತಡಕಾಡುತ್ತಾನೆ. ನಮಗೆ ಚಟಗಳನ್ನು ಬಿಡುವುದಕ್ಕೊಂದು ನೆಪ ಬೇಕು, ಆದರೆ ಮತ್ತದನ್ನೇ ಅಂಟಿಸಿಕೊಳ್ಳುವುದಕ್ಕೆ ಕಾರಣಗಳು ಬೇಕಿಲ್ಲ.

ಸಾಮಾನ್ಯವಾಗಿ ಇಂಥಾ ಪ್ರತಿಜ್ಞೆಗಳೆಲ್ಲಾ ಉದ್ಭವವಾಗುವುದು ಹೊಸವರ್ಷದ ಹಿಂದಿನ ದಿನ. ಅಂದರೆ ಡಿಸೆಂಬರ್ 31ರಂದು. ಆಂಗ್ಲಭಾಷೆಯಲ್ಲಿ ಇದನ್ನು resolution ಅನ್ನುತ್ತಾರೆ. ಹೊಸವರ್ಷಕ್ಕೆ ಹೊಸಮನುಷ್ಯನಾಗಬೇಕು ಎಂಬ ಕಾಳಜಿ ಈ ಪ್ರತಿಜ್ಞೆಯ ಹಿಂದಿರುತ್ತದೆ. ಜೊತೆಗೆ ತನ್ನ ಪ್ರೀತಿಪಾತ್ರರನ್ನು ಮೆಚ್ಚಿಸುವ ಮತ್ತು ತನ್ನ ತನುವನ್ನು ತಾನೇ ಸಂತೈಸಿಕೊಳ್ಳುವ ಹುನ್ನಾರವೂ ಇರುತ್ತದೆ. ಹಳೆಯ ಚಟಗಳಿಗೆ ವಿದಾಯ ಹೇಳಿ, ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಜೀವಕ್ಕೆ ಒಳ್ಳೇದು. ಉದಾಹರಣೆಗೆ ಗುಂಡು ಹಾಕುವುದನ್ನು ಬಿಡುವುದರ ಜೊತೆಗೆ ಅದೇ ದುಡ್ಡನ್ನು ಇನ್ಯಾವುದೋ ಸತ್ಕಾರ್ಯಕ್ಕೆ ವಿನಿಯೋಗಿಸುವುದು. ಒಳ್ಳೆಯ ಪುಸ್ತಕ ಓದುವುದು, ಒಳ್ಳೆಯ ಸಿನಿಮಾ ನೋಡುವುದು, ವಾರಕ್ಕೊಮ್ಮೆ ಸಂಸಾರದ ಜೊತೆ ಪಿಕ್ನಿಕ್ ಹೋಗುವುದು, ದಿನಕ್ಕೆ ಕನಿಷ್ಠ ಒಂದು ತಾಸು ಮನೆಮಂದಿ ಜೊತೆ ಕಾಲಕಳೆಯುವುದು, ಹೊಸ ಟೇಪ್ ರೆಕಾರ್ಡರಲ್ಲಿ ಹಳೇ ಹಾಡುಗಳನ್ನು ಕೇಳುವುದು, ಇವೆಲ್ಲಾ ಒಳ್ಳೆಯ ಶಪಥಗಳು.

ಅಂದಹಾಗೆ 2014ರ ವರ್ಷ ಮುಗಿಯುತ್ತಾ ಬಂದಿದೆ, ಹೊಸವರ್ಷದ ಸ್ವಾಗತಕ್ಕೆ ಜಗತ್ತು ಸಿದ್ಧವಾಗುತ್ತಿದೆ. ಈ ಸಂದರ್ಭದಲ್ಲಿ ನೀವೇನಾದರೂ ಹೊಸ ರೆಸಲ್ಯೂಷನ್ ಗಳನ್ನು ಕೈಗೊಂಡಿದ್ದೀರಾ? ಹಾಗಿದ್ದರೆ ಅದನ್ನು ‘ಓ ಮನಸೇ’ ಜೊತೆ ಹಂಚಿಕೊಳ್ಳಿ. ಅದನ್ನು ನಾವು ಪ್ರಕಟಿಸುತ್ತೇವೆ, ಆ ಮೂಲಕ ನೀವು ಮಾಡಿದ ಪ್ರತಿಜ್ಞೆಗೆ ನೀವು ಕಮಿಟ್ ಆಗಿರುವಂತೆ ನೋಡಿಕೊಳ್ಳುತ್ತೇವೆ. ನಿಮ್ಮ ಪ್ರತಿಜ್ಞೆ ಯಾವುದು ಮತ್ತು ಅದಕ್ಕೆ ಕಾರಣವೇನು ಅನ್ನುವುದನ್ನು ಚುಟುಕಾಗಿ ಬರೆದು ಕಳಿಸಿ (omanse@ravibelagere.com).

ಅಂಕಣದ ಹೆಸರು ‘ನನ್ನ ಶಪಥ’.

ಈ ಕೆಳಗಿನ Form ಮೂಲಕವೂ ನಿಮ್ಮ ಶಪಥವನ್ನು ಕಳಿಸಬಹುದು…

ಹೊಸವರ್ಷಕ್ಕೆ ನಿಮ್ಮ ಶಪಥ ಏನು?

 

Verification

104th issue highlights

104ನೇ ಸಂಚಿಕೆಯ ಹೈಲೇಟ್ಸ್…

104ನೇ ಸಂಚಿಕೆಯ ಹೈಲೇಟ್ಸ್...
104ನೇ ಸಂಚಿಕೆಯ ಹೈಲೇಟ್ಸ್…

ಹಸಿರಾಗಿರುವುದೆಲ್ಲಾ ಗ್ರೀನ್ ಟೀ ಅಲ್ಲ

ಚಾಯ್ ಪೇ ಚರ್ಚಾ

ಸದ್ಯಕ್ಕೆ ಎಬೋಲಾ ಮತ್ತು ಮೋದಿ ಹೊರತಾಗಿ ಇಂಡಿಯಾದಲ್ಲಿ ಅತ್ಯಂತ ಜನಪ್ರಿಯವಾಗಿರುವ ಪದವೆಂದರೆ ಗ್ರೀನ್ ಟೀ. ಈ ಹಸಿರು ಪೇಯವನ್ನು ಕುಡಿದರೆ ನಿಮ್ಮ ಸೊಂಟ ಐಶ್ವರ್ಯ ರೈ ಸೊಂಟದೊಂದಿಗೆ ಪೈಪೋಟಿ ನಡೆಸುತ್ತದೆ, ಕ್ಯಾನ್ಸರ್ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ, ಹೃದಯಾಘಾತ ಆಗುವ ಚಾನ್ಸೇ ಇಲ್ಲ, ಬೀಪಿ ಶುಗರ್ ಪಲಾಯನ ಮಾಡುತ್ತವೆ, ಒಟ್ಟಲ್ಲಿ ನಿಮ್ಮನ್ನು ಶತಾಯುಷಿಗಳನ್ನಾಗಿಸುವ ಸಂಜೀವಿನಿಗೆ ಇನ್ನೊಂದು ಹೆಸರೇ ಗ್ರೀನ್ ಟೀ. ಇಂಥಾ ಭಯಂಕರ ಪ್ರಚಾರದೊಂದಿಗೆ ನಮ್ಮ ಹೊಟ್ಟೆಯನ್ನು ಸೇರುತ್ತಿರುವ ಗ್ರೀನ್ ಟೀಯಲ್ಲಿ ಅಸಲಿಗೆ ಇವೆಲ್ಲಾ ಸದ್ಗುಣಗಳು ಇವೆಯಾ? ಈ ಪ್ರಚಾರದ ಹಿಂದೆ ಯಾವ ಕಾಣದ ಕೈಗಳ ಕೈವಾಡ ಇದೆ? ಬನ್ನಿ ಒಂದು ಕಪ್ ಗ್ರೀನ್ ಟೀ ಕುಡಿಯುತ್ತಾ ಈ ಬಗ್ಗೆ ಚರ್ಚೆ ಮಾಡೋಣ.

ಚಿನ್ನದ ಮೀನು

treasure recovered 3ಕೆಲವರ ಬದುಕು ಸರಳರೇಖೆಯಂತೆ. ತಾವು ಬಯಸಿದ ಉದ್ಯೋಗವನ್ನೇ ಮಾಡುತ್ತಾರೆ, ಜೀವನಪರ್ಯಂತ ಅದೊಂದನ್ನೇ ಮಾಡಿ ಇಹಲೋಕ ತ್ಯಜಿಸುತ್ತಾರೆ,. ಇನ್ನು ಕೆಲವರ ಬದುಕು ಅಡ್ಡಾದಿಡ್ಡಿ.  ಕಲಿತಿದ್ದೊಂದು, ಮಾಡೋದು ಇನ್ನೊಂದು. ಅಮೆರಿಕಾದ ಮೆಲ್ ಫಿಷರ್ ಎಂಬಾತ ಇಂಜಿನಿಯರಿಂಗ್ ಓದಿ ಕೋಳಿ ಫಾರ್ಮ್ ತೆರೆದ. ಆಮೇಲೆ ಡೈವಿಂಗ್ ಸ್ಕೂಲ್ ಶುರು ಮಾಡಿದ. ಕೊನೆಗೆ ಸಮುದ್ರದಾಳಕ್ಕೆ ಜಿಗಿದು ಚಿನ್ನ ಹುಡುಕುತ್ತಾ ತನ್ನ ಇಡೀ ಜೀವನವನ್ನು ಕಳೆದ. ಹೋಗಲಿ, ಅವನಿಗೆ ಚಿನ್ನ ಸಿಗ್ತಾ? ಈ ರೋಮಾಂಚಕಾರಿ ಸತ್ಯಕತೆ ಓದಿ. ಇದು ಕಡಲ ಒಡಲಿಗೆ ಕನ್ನ ಹಾಕಿದವನ ಕತೆ.

ಗೆಳೆಯರಿದ್ದಾರೆ ನೂರು, ಸಾವಿರ. ಆದರೆ ಇವರಿಬ್ಬರು ಮಾತ್ರ…..

ಕುಡಿತವೆಂಬುದು ಪತ್ರಕರ್ತರ ಪಾಲಿಗೆ ಜನ್ಮಕ್ಕಂಟಿದ ಶಾಪ. ಅಂಥಾ ಇಬ್ಬರು ಪತ್ರಕರ್ತರ ಬದುಕಿನ ಕೆಲವು ದಾರುಣ ಪುಟಗಳನ್ನು ರವಿ ಬೆಳಗೆರೆ ತೆರೆದಿಟ್ಟಿದ್ದಾರೆ ‘ಮನಸಿನ್ಯಾಗಿನ ಮಾತ’ಲ್ಲಿ. ಅವರಿಬ್ಬರೂ ಈಗಿಲ್ಲ, ಅವರು ಸಾಯುವ ಹೊತ್ತಿಗೆ ಅವರ ಜೊತೆಗೆ ಯಾರೂ ಇರಲಿಲ್ಲ. ಒಬ್ಬನಿಗೆ ಎರಡು ಕಾಲಾದರೂ ಇದ್ದವು, ಇನ್ನೊಬ್ಬನಿಗೆ ಅದೂ ಇರಲಿಲ್ಲ.

buy-books-online

 

 

 

ಎಲ್ಲ ಕಳಚಿಕೊಳ್ಳುತ್ತಲೇ ಮತ್ತೆ ಹೊಸದನ್ನು ಒಳಗೊಳ್ಳುತ್ತಾ ಸಾಗುವ ಬದುಕಿನ ವಿಸ್ಮಯ

ನಮ್ಮ ಬದುಕು ನಮ್ಮೊಬ್ಬರನ್ನೇ ಅವಲಂಬಿಸಿಲ್ಲ. ಅದು ಅನೇಕರ ಸ್ನೇಹ-ಪ್ರೀತಿಗಳನ್ನೊಳಗೊಂಡ ಚೈತ್ರದ ಚಿಗುರಿನಂತೆ. ಅವುಗಳನ್ನು ನಿಭಾಯಿಸುವ ಋಣಭಾರ, ಅವಲಂಬನೆಗಳಂಥ ಮಾತನ್ನು ಯೋಚಿಸಲು ಹೊರಟರೆ ಬದುಕುವುದೇ ಕಷ್ಟವಾಗುತ್ತದೆ. ಸಂಬಂಧಗಳೇ ಹೀಗೆ ಪತಝಡ್ ಥರ. ಎಲ್ಲ ಕಳಚಿಕೊಂಡೆವು ಅನ್ನುವಷ್ಟರಲ್ಲಿ ಮತ್ತೆ ವ್ಯಾಮೋಹ ಬೆಳೆದಿರುತ್ತದೆ. ದೆಹಲಿಯ ಋತುಮಾನಗಳನ್ನು ನೆನೆಯುತ್ತಾ ರೇಣುಕಾ ನಿಡಗುಂದಿ ಬರೆಯುತ್ತಾರೆ.

ನಾನು ದೊಡ್ಡೋಳಾದೆ!

 

Indian girlಋತುಮತಿಯಾಗುವುದು ಅಂದರೆ ಹೆಣ್ಣಿನ ದೇಹದಲ್ಲಷ್ಟೇ ಆಗುವ ಬದಲಾವಣೆಯಲ್ಲ, ಅದು ಮನಸ್ಸಿಗೂ ಸಂಬಂಧಿಸಿದ್ದು. ಒಂದೆಡೆ ಸಂಭ್ರಮ, ಇನ್ನೊಂದೆಡೆ ಮುಜುಗರ, ಆತಂಕ. ತಂಪಿನ ನೆರಳಿನಲ್ಲಿ ಅರಿಶಿಣದ ಕಂಪಲ್ಲಿ ಕಟ್ಟಿಕೊಂಡ ಇಂಪಿನ ಕನಸುಗಳನ್ನು ನೆನಪಿಸಿಕೊಂಡಾಕೆಯ ಭಾವಲಹರಿ ಇಲ್ಲಿದೆ.

ಟಾಪ್ ಟೆನ್ ಐಡಿಯಾಸ್

Goodbye-2014-image-and-hello-2015-photoಇನ್ನೇನು ಡಿಸೆಂಬರ್ ಮುಗೀತಾ ಬಂತು. ಅಂದಹಾಗೆ ಹೊಸವರ್ಷಕ್ಕೆ ನಿಮ್ಮ ರೆಸಲ್ಯೂಷನ್ ಗಳೇನು? ಕುಡಿಯೋಲ್ಲ, ಸಿಗರೇಟು ಸೇದೋಲ್ಲ, ಸಿಟ್ಟು ಮಾಡ್ಕೊಳ್ಳೋಲ್ಲ ಇವೆಲ್ಲವೂ ಇದ್ದಿದ್ದೇ. ಕಾನೂನಿನ ಬದ್ಥತೆ ಮತ್ತು ದೇವರ ಭಯ ಇಲ್ಲದೇ ಇರುವ ಯಾವ ನಿರ್ಧಾರಗಳೂ ಕಾರ್ಯರೂಪಕ್ಕೆ ಬರೋಲ್ಲ. ಅದಕ್ಕೇ ಈ ಬಾರಿ ನಾವೇ ನಿಮಗೆ ಟಾಪ್ ಟೆನ್ ಐಡಿಯಾ ಕೊಡುತ್ತಿದ್ದೇವೆ. ಆಲಿಸಿ…ಪಾಲಿಸಿ…

ಚಕೋರಂಗೆ ಚಂದ್ರಮನ ಚಿಂತೆ

Chakora Pakshiಚಕೋರ ಎಂಬ ಪಕ್ಷಿ ಚಂದ್ರಮನ ಬೆಳದಿಂಗಳನ್ನು ಮಾತ್ರ ಕುಡಿಯುತ್ತದಂತೆ. ಪುರಾವೆ ಎಲ್ಲಿದೆ ಎಂದು ಕೇಳಬೇಡಿ. ಇದು ಕವಿಸಮಯ. ಹಂಸಕ್ಷೀರ ನ್ಯಾಯದಲ್ಲಿ ಹಂಸಪಕ್ಷಿ ಹಾಲು ಮತ್ತು ನೀರನ್ನು ಪ್ರತ್ಯೇಕ ಮಾಡುವುದು, ಹಾವು ಹನ್ನೆರಡು ವರ್ಷದ ನಂತರವೂ ದ್ವೇಷ ಸಾಧಿಸುವುದು ಇವೆಲ್ಲವೂ ಕವಿಸಮಯವೇ. ಆದರೆ ಕೆಲವೊಮ್ಮೆ ಕವಿಸಮಯದಲ್ಲಿ ಹಾಜರಾಗುವ ಜೀವಿಗಳು ವಾಸ್ತವದಲ್ಲೂ ಕಾಣಿಸುತ್ತವೆ. ಉದಾಹರಣೆಗೆ ಚಕ್ರವಾಕ, ಚಾತಕ ಮತ್ತು ಚಕೋರ. ಈ ಪಕ್ಷಿಗಳ ಕತೆ ಕೇಳುವಂತವರಾಗಿ.

ಷಂಡನಿಗೆ ಗಂಡನಾಗಿ ಬದುಕು ದಂಡವಾಗಿ ಹೋಯಿತು

ಅವನು ಗಂಡಸಲ್ಲ ಅಂತ ಗೊತ್ತಿದ್ದೂ ಇವನು ಅವನ ಸಂಗ ಮಾಡಿದ, ಆ ತಪ್ಪಿಗೆ ದಂಡವನ್ನೂ ಕಟ್ಟಿದ್ದಾಯಿತು. ಬದುಕು ಚಿತ್ರಾನ್ನವಾಗಿ ಹೋಯಿತು. ಇದು ಸಲಿಂಗಕಾಮಿಯೊಬ್ಬನ ಸಮಸ್ಯೆ. ‘ಸಮಾಧಾನ’ದಲ್ಲಿ ಅವನಿಗೊಂದು ಪರಿಹಾರ ನೀಡಲಾಗಿದೆ. ಓದಿ ನೋಡಿ.

ಇವೆಲ್ಲ ಲೇಖನಗಳ ಜೊತೆ ನಿಮ್ಮ ಮೆಚ್ಚಿನ ಕಾಲಂಗಳು ಎಂದಿನಂತೆ ರಾರಾಜಿಸುತ್ತಿವೆ. ವಿಭೂತಿ ಪುರುಷರನ್ನೇಕೆ ಆರಾಧಿಸಬೇಕು (ಆಚಾರವಿಚಾರ), ಪ್ರಕೃತಿಯೊಂದಿಗೆ ಒಂದಾಗುವುದಕ್ಕಿಂತ ದಿವ್ಯ ಔಷಧಿ ಯಾವುದಿದೆ (ಹಸನ್ಮುಖಿ), ನ್ಯಾಯ ಎಲ್ಲಿದೆ (ಅಚಾರ ವಿಚಾರ), ನಿರಾಸೆಯನ್ನು ಮೀರುವುದು ಹೇಗೆ (ಚೈತನ್ಯದ ಚಿಲುಮೆ),  ಕಡಿಮೆ ಬೆಲೆಗೆ ಒಳ್ಳೇ ಕೆಮರಾ (ವಾಟ್ಸ್ ಅಪ್), ಆ ರಾಕ್ಷಸನನ್ನು ಜನರು ಪೂಜಿಸುತ್ತಾರೆ (ಪುರಾಣಪ್ರಪಂಚ)……

 

ಮನೋಲ್ಲಾಸಕ್ಕೆ ಇರುವುದೊಂದೇ ದಾರಿ, ‘ಓ ಮನಸೇ’ ಓದಿರಿ. ಇದು ಮಾಹಿತಿಗಳ ಕಣಜವಲ್ಲ, ಭಾವನೆಗಳ ಖಜಾನೆ. 104ನೇ ಸಂಚಿಕೆ ಮಾರುಕಟ್ಟೆಯಲ್ಲಿದೆ.

 

 

 

 

 

 

 

 

 

 

 

103rd ISSUE HIGHLIGHTS

103ನೇ ಸಂಚಿಕೆಯ ವೀಡಿಯೋ ಹೈಲೇಟ್ಸ್

youtube

ಐಯಾಮ್ ಯೂಸ್ ಲೆಸ್ ಅಂತ ಅನಿಸುತ್ತಿದೆಯಾ?

ಯೂ ಆರ್ ಎ ಯೂಸ್ ಲೆಸ್ ಫೆಲೋ. ಹಾಗಂತ ಯಾರಾದರೂ ಹೀಯಾಳಿಸಿದರೆ ನಮಗೆ ಸಿಟ್ಟು ಬಾರದೇ ಇರುತ್ತಾ? ಆದರೆ ಈಗ ನಮಗೇ ನಮ್ಮ ಬಗ್ಗೆ ಹಾಗನ್ನಿಸೋದಕ್ಕೆ ಶುರುವಾಗಿದೆ. ಇದು ಜ್ಞಾನೋದಯವಲ್ಲ, ಹತಾಶೆ. ನಾವು ಯಾವುದೇ ಕೆಲಸ ಮಾಡುತ್ತಿದ್ದರೂ ಆ ವೃತ್ತಿಯಲ್ಲಿ ಸಾರ್ಥಕತೆ ಇಲ್ಲ ಎಂಬ ಸ್ಥಿತಿಗೆ ನಾವು ತಲುಪಿದ್ದೇವೆ. ಸಾರ್ಥಕತೆ ಇಲ್ಲದೇ ಹೋದಾಗ ವೃತ್ತಿ ಯಾಂತ್ರಿಕವಾಗುತ್ತದೆ, ಮನಸ್ಸಿಗೆ ಬೇಸರವಾಗುತ್ತದೆ. ಬೇಸರ, ಹತಾಶೆಯನ್ನು ಮೂಡಿಸುತ್ತದೆ. ನಮ್ಮ ಬದುಕು ಕೂಡಾ ಹಾಗೆಯೇ. ನಾವು ಉಪಯುಕ್ತರೋ ನಿರುಪಯುಕ್ತರೋ ಅನ್ನುವುದು ನಮಗೇ ಗೊತ್ತಿಲ್ಲ. ಬದುಕಿನ ದೊಡ್ಡ ಪ್ರಶ್ನೆಯೆಂದರೆ ಅದೇ. ನಾವು ಉಪಯುಕ್ತರಾಗಬೇಕೇ, ನಿರುಪಯುಕ್ತರಾಗಬೇಕೇ? ಹತ್ತು ವರ್ಷಗಳ ಹಿಂದೆ ಹೀಗಿರಲಿಲ್ಲ. ನಾವು ಏನು ಮಾಡುತ್ತಿದ್ದೇವೆ ಅನ್ನುವುದು ನಮಗೆ ಸ್ಪಷ್ಟವಾಗಿ ಗೊತ್ತಿರುತ್ತಿತ್ತು. ಆ ಕೆಲಸದಲ್ಲಿ ಸಂತೋಷ ಸಿಗದೇ ಇದ್ದರೂ ನಿರರ್ಥಕತೆಯ ಸುಳಿವೂ ಇರುತ್ತಿರಲಿಲ್ಲ. ಈಗ್ಯಾಗೆ ಹೀಗೆ? ನಿರರ್ಥಕ ಜಗತ್ತಿನಲ್ಲೊಂದು ಸುತ್ತು ಹೊಡೆದು ಬಂದ “ಜಾನಕಿ” ಮನುಜನ ವರ್ತಮಾನದ ತಲ್ಲಣಗಳನ್ನು ಮನಮುಟ್ಟುವಂತೆ ಬರೆದಿದ್ದಾರೆ.

ನಿರರ್ಥಕ ಜಗತ್ತಿನಲ್ಲೊಂದು ಸುತ್ತು
ನಾವೇನು ಮಾಡುತ್ತಿದ್ದೇವೆ ಎಂದು ನಮಗೇ ಗೊತ್ತಿಲ್ಲ ಅನ್ನುವುದು ಬಾಟಮ್ ಲೈನು

ವಿರಹ ಮಧುರ ಯಾತನೆ ಅಮರ
main_image-49541ಬೃಂದಾವನದ ಬೆಳದಿಂಗಳಲ್ಲಿ ರಾಧೆ-ಕೃಷ್ಣ ಒಂದಾದರು. ಒನ್ ಫೈನ್ ಡೇ, ಕೃಷ್ಣ ಲೋಕಕಲ್ಯಾಣಕ್ಕಾಗಿ ಗೋಕುಲವನ್ನು ಬಿಟ್ಟು ಮಥುರೆಗೆ ತೆರಳಿದ. ರಾಧೆ ಮತ್ತು ಆಕೆಯ ಪ್ರೀತಿ ಗೋಕುಲದಲ್ಲೇ ಉಳಿಯಿತು. ಯುಗಗಳು ಕಳೆದರೂ ಜನರು ರಾಧಾಕೃಷ್ಣರ ಪ್ರೇಮಕತೆಯನ್ನು ಮರೆತಿಲ್ಲ. ಪಾರು-ದೇವದಾಸರ ದುರಂತ ಪ್ರೇಮಕತೆಯನ್ನೂ ಮರೆತಿಲ್ಲ. ಹರೆಯದ ಹುಡುಗ-ಹುಡುಗಿಯರಿಗೆ ಫೀಲಿಂಗು ಸಾಂಗುಗಳೇ ಇಷ್ಟ. ಅದ್ಯಾಕೆ ನಮ್ಮ ಜನರಿಗೆ ವಿನೋದಕ್ಕಿಂತ ವಿಷಾದವೇ ಹೆಚ್ಚು ಪ್ರಿಯವಾಗುತ್ತದೆ? ಪೆಗ್ಗೇರಿಸದೇ ಕಿಕ್ಕು ಸಿಗಬೇಕಾದರೆ ಈ ಲೇಖನ ಓದಿರಿ.

ಬೀಪಿ ಮತ್ತು ಶುಗರ್ ಎಂಬ ಕಿಲಾಡಿ ಜೋಡಿ

woman-having-blood-pressure-takenಈ ಇಬ್ಬರು ಅತಿಥಿಗಳು ಕರೆಯದೇ ಬರುತ್ತಾರೆ, ನಿಮ್ಮ ಪ್ರಾಣ ಹಿಂಡುತ್ತಾರೆ. ಅವರು ಯಾಕೆ ಬರುತ್ತಾರೆ? ಹೇಗೆ ಬರುತ್ತಾರೆ? ಅವರಿಂದ ಬಚಾವಾಗುವುದಕ್ಕೆ ಏನಾದರೂ ದಾರಿಗಳಿವೆಯಾ? ನಾವು ಮತ್ತೆ ಹಳೆಯ ಕಾಲದತ್ತ ಹೊರಳುವುದಕ್ಕೆ ಕಾಲ ಕೂಡಿ ಬಂದಿದೆಯಾ? ಫುಲ್ ಡೀಟೇಲ್ಸ್ ಇಲ್ಲಿದೆ. ಇಲ್ಲಿರುವ ಮಾಹಿತಿಗಳು ಕೊಂಚ ಕಹಿಯೆನಿಸಿದರೂ, ಅವುಗಳನ್ನು ಸತ್ಯ ಎಂದು ಒಪ್ಪಿಕೊಂಡು ಬದುಕಿದರೆ ಜೀವನ ಸಿಹಿಯಾಗಿರುತ್ತದೆ.

buy-books-online

 
ಸಾವಿನ ಸುತ್ತ ಅದೆಷ್ಟು ನೆನಪುಗಳೋ?

ಒಂದೇ ಒಂದು ಬೌನ್ಸರ್ ಇಪ್ಪತ್ತೈದರ ಹುಡುಗನನ್ನು ಬಲಿ ತೆಗೆದುಕೊಂಡಿತು. ಕೆಲವು ಆಟಗಳೇ ಹಾಗೆ, ತುಂಬಾ ಅಪಾಯಕಾರಿ. ಫುಟ್ ಬಾಲ್, ರಗ್ಬಿ, ಸ್ಕೀಯಿಂಗ್, ಇವೆಲ್ಲವೂ ಮನುಷ್ಯನೊಳಗಿರುವ ಸಾಹಸದ ಗುಣಕ್ಕೆ ಸಂಕೇತವಾಗುತ್ತವೆ. ಕೆಲವರು ಚಾಂಪಿಯನ್ ಆಗುತ್ತಾರೆ, ಇನ್ನು ಕೆಲವರು ಸಾಯುತ್ತಾರೆ ಅಥವಾ ವೀಲ್ ಚೇರಲ್ಲೇ ಜೀವನ ಕಳೆಯುತ್ತಾರೆ. ಹುಟ್ಟಲ್ಲಿಕ್ಕೆ ಇರುವುದು ಎರಡೇ ದಾರಿ – ನಾರ್ಮಲ್ ಅಥವಾ ಸಿಝೇರಿಯನ್. ಆದರೆ ಸಾವಿಗೆ ಸಾವಿರ ದಾರಿ. ಫಿಲಿಪ್ ಹ್ಯೂಸ್ ನ ಸಾವನ್ನು ನೆನೆಯುತ್ತಾ ತಮ್ಮ ನೆನಪುಗಳನ್ನು ಬಗೆಯುತ್ತಾ ಹೋಗುತ್ತಾರೆ ರವಿ ಬೆಳಗೆರೆ ಮನಸಿನ್ಯಾಗಿನ ಮಾತಲ್ಲಿ.

 ಶಿವಪೂಜೆಯಲ್ಲಿ ಕರಡಿ!
ಕತ್ತಲಲ್ಲಿ ಕರಡೀಗೆ ಜಾಮೂನು ತಿನಿಸೋಕ್ಕೆ ಹೋಗಬೇಡಿ ಎಂದು ಭಟ್ಟರು ಕೊಟ್ಟ ಎಚ್ಚರಿಕೆಯಲ್ಲಿರುವುದು ಜಾಮೂನು ಅಲ್ಲ, ಬದಲಾಗಿ ನೇರಳೆ ಹಣ್ಣು ಅನ್ನುತ್ತಾರೆ ಚಕ್ರವಾಕ. ಈ ಬಾರಿಯ ವಾಗರ್ಥ ಚೂಡಾಮಣಿ ಅಂಕಣದಲ್ಲಿ ಕರಡಿ ಕತೆಯಿದೆ. ಕರಡಿ ಎಂಬ ಪದ ಹೊರಡಿಸುವ ನಾನಾ ಅರ್ಥಗಳ ಕತೆಯೂ ಇದೆ. ಬೇಂದ್ರೆಯ ಪದ್ಯ ಬರುತ್ತದೆ, ಜಾಂಬವಂತನ ಯುದ್ಧದ ಕತೆಯೂ ಬರುತ್ತದೆ. ಮನುಷ್ಯನ ಗುಲಾಮನಾಗಿ ತನನ ತಾನನ ತಂದಾನ ಎಂದು ಕುಣಿಯುವ ಕರಡಿಯ ಅಸಹಾಯಕ ಬದುಕಿನ ವ್ಯಥೆಯೂ ಬರುತ್ತದೆ.


Prema Om (2)ಚಂದ್ರಮುಖಿ.. ಪ್ರಾಣಸಖಿ…
ಆ ಎತ್ತರದ ಹುಡುಗಿ ನಿಮಗೆ ಗೊತ್ತುಂಟಲ್ಲವಾ? ಓಂ ಪಿಕ್ಚರ್ ನಲ್ಲಿ ಶಿವರಾಜ್ ಕುಮಾರ್ ಅವರನ್ನು ರೌಡಿಸಂಗೆ ಹಚ್ಚಿ, ಕೈಗೆ ಮಚ್ಚು ಕೊಟ್ಟ ಹುಡುಗಿ. ನಮ್ಮೂರ ಮಂದಾರ ಹೂವೆಯಲ್ಲಿ ಇಬ್ಬರು ಪ್ರೇಮಿಗಳ ನಡುವೆ ಸಿಕ್ಕು ಸ್ಯಾಂಡ್ ವಿಚ್ ಆದ ಹುಡುಗಿ. ವಿಷ್ಣುವರ್ಧನ್ ಅವರ ಜೊತೆ ಏಳು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ದಾಖಲೆ ಮಾಡಿದ ಹುಡುಗಿ. ಬೇಡಿಕೆಯಲ್ಲಿದ್ದಾಗಲೇ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಗೃಹಿಣಿ ಪಟ್ಟವನ್ನೇರಿದ ಹುಡುಗಿ. ಈಗ ಆಕೆಯ ಅಂತರಂಗದಲ್ಲೇನಿದೆ? ನಾವು ಪತ್ತೆ ಹಚ್ಚಿದ್ದೇವೆ. ಪ್ರೇಮಾಂತರಂಗವನ್ನು ಶೋಧಿಸುವ ವಿಶೇಷ ಲೇಖನ ಈ ಬಾರಿಯ ನಾನು ನನ್ನಿಷ್ಟ ಅಂಕಣದಲ್ಲಿ.

ಜನ ಮರುಳೋ, ಮೋದಿ ಮರುಳೋ?

ಒಬಾಮಾ ಮಾತಲ್ಲೇ ಸ್ವರ್ಗ ತೋರಿಸಿ ಅಮೆರಿಕಾದ ಅಧ್ಯಕ್ಷರಾದರು. ಮೋದಿ ಮಾಡಿದ್ದು ಅದನ್ನೇ. ಕಳೆದ ಹತ್ತು ವರ್ಷದಲ್ಲಿ ಇಷ್ಟು ಚೆನ್ನಾಗಿ ಭಾಷಣ ಮಾಡುವವರು ನಮ್ಮ ಜನರಿಗೆ ಸಿಕ್ಕಿರಲಿಲ್ಲ. ಹಾಗಾಗಿ ಮೋದಿ ದೇವರಾದರು. ಆದರೆ ಒಬ್ಬ ನಾಯಕ ಜನಪ್ರಿಯತೆಯ ಉತ್ತುಂಗದಿಂದ ಜನದ್ವೇಷದ ಪಾತಾಳಕ್ಕೆ ಕುಸಿಯೋದಕ್ಕೆ ಬಹಳ ಕಾಲ ಬೇಕಾಗಿಲ್ಲ. ಒಬಾಮಾಗೆ ಆಗಿದ್ದು ಅದೇ. ಮೋದಿ ಹಾಗಾಗದೇ ಇರುವುದಕ್ಕೆ ಏನು ಮಾಡಬೇಕು? ಮೋದಿ ಈ ಲೇಖನವನ್ನು ಹಿಂದಿಗೆ ಅನುವಾದ ಮಾಡಿ ಓದಿದರೆ ಚೆನ್ನಾಗಿರೋದು!

ಅತ್ಯಾಚಾರಿ ಮನೆಯೊಳಗೇ ಇದ್ದಾನೆ ಎಚ್ಚರ

ಮಥುರೆಯ ಹಳ್ಳಿಯೊಂದರಲ್ಲಿ ರಾಜನೊಬ್ಬ ತನ್ನ ಮಗಳನ್ನೇ ಪ್ರೀತಿಸಿದ. ಪ್ರಜೆಗಳು ಈ ಸಂಬಂಧಕ್ಕೆ ರುಜು ಹಾಕಿದರು. ಆದರೆ ಆ ಹುಡುಗಿ ಹಾಕಿದ್ದು ಶಾಪ. ಅದರ ಪರಿಣಾಮವಾಗಿ ಇಡೀ ಹಳ್ಳಿಯೇ ನಾಶವಾಯಿತು. ಈ ಕತೆ ಮತ್ತೆ ಪುನರಾವರ್ತನೆಯಾಗುವ ಕಾಲ ಬಂದಿದೆಯಾ? ರಾಜಧಾನಿ ಮೇಲ್ ಅಂಕಣದಲ್ಲಿ ಮಕ್ಕಳನ್ನೇ ಹರಿದು ಮುಕ್ಕುವ ಅತ್ಯಾಚಾರಿಗಳ ಜನ್ಮ ಜಾಲಾಡಿದ್ದಾರೆ ರೇಣುಕಾ ನಿಡಗುಂದಿ.

ನಾಗವೇಣಿಯ ಜುಟ್ಟು ಕೊತ್ತಂಬರಿ ಕಟ್ಟಾಗಿದ್ದು ಹೇಗೆ?

ಸೋಪು, ಪೌಡರ್, ಕ್ರೀಮುಗಳನ್ನು ಹಚ್ಚಿಕೊಂಡು ಮುಖದ ಚೆಲುವು ಕೆಡಿಸಿಕೊಳ್ಳುತ್ತಿರುವ ಹುಡುಗಿಯರು ಈ ಲೇಖನ ಓದಲೇಬೇಕು. ಹಸನ್ಮುಖಿ ಅಂಕಣದಲ್ಲಿ ಅನುರಾಧಾ ಶ್ರೀಧರ್ ಅವರು ಈಗಿನ ಹುಡುಗಿಯರಿಗೆ ಬೆಲೆಬಾಳುವ ಟಿಪ್ಸ್ ನೀಡಿದ್ದಾರೆ. ಓದಿ ತಿಳಿಯಿರಿ, ಮಾಡಿ ಕಲಿಯಿರಿ.

ಇವೆಲ್ಲದರ ಜೊತೆ ನಿಮ್ಮ ಮೆಚ್ಚಿನ ಅಂಕಣಗಳು – ಸಮಾಧಾನ, ರೀಡರ್ಸ್ ಡೈಜೆಸ್ಟ್, ಆಚಾರ ವಿಚಾರ, ಚೈತನ್ಯದ ಚಿಲುಮೆ, ಪುರಾಣ ಪ್ರಪಂಚ, ಲಾ ಪಾಯಿಂಟ್, ವಾಟ್ಸ್ ಅಪ್, ಸಿಂಪಲ್ ಸಯನ್ಸ್, ಫೊಟೋ ಪೇಜ್, ಇತ್ಯಾದಿ.

‘ಓ ಮನಸೇ’ಯ 103ನೇ ಸಂಚಿಕೆ ಈಗಾಗಲೇ ಮಾರುಕಟ್ಟೆಯಲ್ಲಿದೆ. ಡೋಂಟ್ ಮಿಸ್.

102nd issue highlights

ಎಳೆಯ ಗೆಳೆಯರ ಮುಂದೆ ಹೊಳೆವ ತಾರೆಯಂತೆ….
102“ಓ ಮನಸೇ ಪತ್ರಿಕೆಗೆ ಬರೆಯುವಾಗ ನನ್ನ ಕಣ್ಣ ಮುಂದೆ ಹರಡಿಕೊಳ್ಳುವವರು ನೀವೇ. ನೀವು ನನಗಿಂತ ಚಿಕ್ಕವರು. ಈಗಷ್ಟೇ ಮೂಡುತ್ತಿರುವ ಚಿಗುರುಮೀಸೆ, ಎಳೆಯ ಕೆನ್ನೆ, ಕಳಂಕವಿಲ್ಲದ ಕಣ್ಣುಗಳು, ಎಂಥದ್ದೋ ಅದಮ್ಯ ಉತ್ಸಾಹ, ಏನೇನೆಲ್ಲ ತಿಳಿದುಕೊಳ್ಳಬೇಕು ಅನ್ನುವ ಕುತೂಹಲ, ಇಸ್ತ್ರಿ ಬೇಡದ ಜೀನ್ಸ್ ಪ್ಯಾಂಟು, ಈಗಷ್ಟೇ ಅಪ್ಪ ಕೊಡಿಸಿದ ಲಂಗಜಾಕೀಟು, ಒಂದು ಅಮಾಯಕ ನಿರೀಕ್ಷೆ. ಯಸ್, ನೀವಿನ್ನೂ ಹಾಗೇ ಇದ್ದೀರಿ. Of course, ಈ ಪತ್ರಿಕೆಯನ್ನು ದೊಡ್ಡವರು ಓದೋಲ್ವೇನೋ ಅಂತ ಕೇಳ್ತೀರೇನೋ? ಖಂಡಿತವಾಗಿಯೂ ಓದುತ್ತಾರೆ, ಕೆಲವು ಮನೆಗಳಿಗೆ ತರುವವರೇ ಅವರು. ಎಲ್ಲಾ ವಯಸ್ಸಿನ ಹೆಣ್ಮಕ್ಕಳು-ತಾಯಂದಿರು ಓದುತ್ತಾರೆ. ನಮ್ಮ ರವಿ ಅಸಹ್ಯವಾದದ್ದನ್ನ ಅಥವಾ ಅಶ್ಲೀಲವಾದದ್ದನ್ನ ಬರೆಯುವುದಿಲ್ಲ ಎಂಬ ದೊಡ್ಡ ನಂಬಿಕೆ ಇಟ್ಟುಕೊಂಡೇ ಒಯ್ಯುತ್ತಾರೆ. ಓದಲು ಮಗಳಿಗೆ ಕೊಡುತ್ತಾರೆ, ಬೆಳೆಯುತ್ತಿರುವ ಮಗನಿಗೆ ಕೊಡುತ್ತಾರೆ. ಈ ಪತ್ರಿಕೆ ಅದ್ಯಾವ ನಂಬಿಕೆ, ಮುಗ್ಧತೆ, ವಿಶ್ವಾಸ ಇತ್ಯಾದಿಗಳನ್ನು ನಾಶಪಡಿಸುವುದಿಲ್ಲ. ಒಳ್ಳೆಯದ್ಯಾವುದನ್ನೂ destroy ಮಾಡುವುದಿಲ್ಲ” .

ಇದು ರವಿ ಬೆಳಗೆರೆ ಅವರ ‘ಮನಸಿನ್ಯಾಗಿನ ಮಾತಿ’ನ ಕೆಲವು ಸಾಲುಗಳು. ಈ ಪೀಠಿಕೆಯೊಂದಿಗೇ ಈ ಸಲದ ‘ಓ ಮನಸೇ’ ಸಂಚಿಕೆಯನ್ನು ನೀವು ಓದಬೇಕು.

ಹೃದಯದ ಮಾತು ಕೇಳು ನನ್ನಾ ಒಲವೇ..
ಕೇಜಿಗಟ್ಟಲೆ ಪ್ರೀತಿ ಕೆಡದಿರಲು ಐದು ಕ್ರೇಜಿ ಐಡಿಯಾಗಳನ್ನು ಕಂಡುಹಿಡಿದಿದ್ದಾರೆ ಸುಪ್ರಿಯಾ. ಹೊಸ ಕಾಲವನ್ನು ಮರೆತು ಪ್ರೀತಿಯನ್ನು ಹಳೆಯದಂತೆಯೇ ಅನುಭವಿಸಲು ಪ್ರಯತ್ನಿಸಿ, ಆಗ ನಿಮ್ಮ ಪ್ರೀತಿ ರಿನ್ಯೂವಲ್ ಆಗುತ್ತದೆ ಅನ್ನೋದು ಬಾಟಮ್ ಲೈನ್. ಪ್ರೀತಿಯಲ್ಲಿ ಬಿದ್ದವರಿಗೆ ಈ ಲೇಖನವೊಂದು ಹಾಯಿದೋಣಿ.

ಎಲಿಜಬೆಥ್ ಏಕಾದಶಿ
Elizabeth Ekadashi-1ನಿಮಗೆ ಫಾಲ್ಕೆ ಗೊತ್ತುಂಟಲ್ವಾ? ಭಾರತೀಯ ಚಿತ್ರರಂಗದ ಈ ಪಿತಾಮಹನ ಬದುಕೇ ಒಂದು ಸಿನಿಮಾ ಕತೆ. ಅದನ್ನೇ ಪಿಕ್ಚರ್ ಮಾಡ್ತೀನಿ ಅಂತ ಹೊರಟು ಬರಿಗೈ ದಾಸನಾದವನ ಹೆಸರು ಪರೇಶ್ ಮೊಕಾಶಿ. ಆದರೇನಂತೆ ಪರೇಶಿಯ ಹರಿಶ್ಚಂದ್ರಾಚಿ ಫ್ಯಾಕ್ಟರಿ ಸಿನಿಮಾ ಹಿಟ್ ಆಯಿತು. ಈಗ ಇಂಗ್ಲೆಂಡಿನ ರಾಣಿ ಎಲಿಜಬೆಥ್ ಮತ್ತು ಪಂಡರಾಪುರದ ವಿಠಲನನ್ನು ಒಟ್ಟಿಗೇ ತಂದು ಇನ್ನೊಂದು ಪಿಕ್ಚರ್ ಮಾಡಿದ್ದಾನೆ ಈ ಜಾಣಹುಚ್ಚ. ಅವನ ಕತೆ ಬಹಳ ಮಜಾ ಇದೆ.

ವಿಪರೀತ ಸಿಟ್ಟಿನವನಾದ ನಾನು ಏನೆಲ್ಲಾ ಮಾಡಿಕೊಂಡೆ
ಗಂಡ ಹೆಂಡತಿ ಭೀಕರವಾಗಿ ಜಗಳ ಆಡಿದರು. ಹೆಂಡತಿಯೇ ಗಂಡನನ್ನು ಮನೆಯಿಂದ ಹೊರಗೆ ಹಾಕಿದಳು. ಈಗ ಆತ ಗೊಳೋ ಎಂದು ಭೋರಿಡುತ್ತಿದ್ದಾನೆ. ರವಿ ಬೆಳಗೆರೆ ಅವನಿಗೆ ಸಮಾಧಾನ ಹೇಳಿದ್ದಾರೆ. ಜಗಳಗಂಟ ದಂಪತಿಗಳೆಲ್ಲಾ ಇದನ್ನು ಓದಲೇಬೇಕು.
buy-books-online

ನಾನು ನಿನ್ನವನೆಂಬ ಹೆಮ್ಮೆಯೂ ..ಋಣವೂ…
ಉತ್ತರಭಾರತದ ಬಹುದೊಡ್ಡ ಶೃಂಗಾರ ಮತ್ತು ರಮ್ಯ ಹಬ್ಬವೆಂದರೆ ಕರವಾ ಚೌತ್. ಕೆಲವರ ಬಾಯಲ್ಲಿ ರತಿಹಬ್ಬ ಅನ್ನುವಷ್ಟು ಪುಳಕ, ಲಜ್ಜೆ. ಆವತ್ತು ಏನೇನೆಲ್ಲಾ ನಡೀತದೆ ಅಂತ ಬರೀತಾರೆ ರೇಣುಕಾ ನಿಡಗುಂದಿ.

ಮಕ್ಕಳು ದೊಡ್ಡೋರಾದ್ರು, ದೊಡ್ಡೋರು ದಡ್ಡರಾದ್ರು
ತಂತ್ರಜ್ಞಾನದ ಈ ಯುಗದಲ್ಲಿ ಮಕ್ಕಳ ಪ್ರೀತಿಪ್ರೇಮಪ್ರಣಯವೆಂಬುದು ವೃಷಭಾವತಿ ನದಿಯಂತೆ ಎಲ್ಲಾ ಕೊಚ್ಚೆಗಳನ್ನು ತನ್ನೊಳಗೆ ಸೇರಿಸಿ ರಭಸದಿಂದ ಹರಿಯುತ್ತಿದೆ. ಅಪ್ಪ ಅಮ್ಮನಿಗೆ ಇದರ ವಾಸನೆ ಬರುತ್ತಿದೆ, ಆದರೆ ನದಿ ಎಲ್ಲಿ ಹರೀತಿದೆ ಅಂತ ಗೊತ್ತಾಗ್ತಿಲ್ಲ. ಇದಕ್ಕೆ ಪರಿಹಾರ ಏನು. ಮಹಾಶ್ವೇತ ಉತ್ತರಿಸಿದ್ದಾರೆ.ಸ್ತ್ರೀ ಅಂದರೆ ಇಷ್ಟೆ ಸಾಕೆ?
ಈ ಸಂಚಿಕೆಯಿಂದ ಮಹಿಳೆಯರಿಗೆ ಮಾತ್ರ ಅನ್ನುವಂಥ ಹೊಸ ಅಂಕಣ ಶುರುವಾಗುತ್ತಿದೆ. ಹೆಸರು ಹಸನ್ಮುಖಿ. ಹೆಣ್ಮಕ್ಕಳು ತಮ್ಮತನವನ್ನು ಉಳಿಸಿಕೊಂಡು, ತಮ್ಮ ಕುಟುಂಬ, ಆರೋಗ್ಯವನ್ನು ಕಾಪಾಡಿಕೊಂಡು ಬದುಕುವ ಬಗೆಯನ್ನು ಅನುರಾಧ ಶ್ರೀಧರ್ ಅವರು ಕಂತುಕಂತಲ್ಲಿ ಬರೆಯಲಿದ್ದಾರೆ. ವಿಜ್ಞಾನದ ವಿದ್ಯಾರ್ಥಿಗಳಿಗೆ ಸಿಂಪಲ್ ಸಯನ್ಸ್ ಎಂಬ ಇನ್ನೊಂದು ಅಂಕಣವಿದೆ.

‘ಓ ಮನಸೇ’ ಯಲ್ಲಿ ಕತೆ ಬರ್ತಾನೇ ಇಲ್ಲ ಎಂದು ರಾಗ ಎಳೆಯುವವರಿಗೆ ಈ ಬಾರಿ ‘ಅಪ್ಪಾ ನನ್ನನ್ನು ಹೇಗೆ ಸಾಕಿದ್ರಿ’ ಎಂಬ ಮನಮಿಡಿಯುವ ಕತೆ ಇದೆ. ಜೊತೆಗೆ ‘ಅತಿಮಧುರಾ ಅನುರಾಗ’ದ ಕೊನೆಯ ಕಂತು, ಗಾದೆಮಾತುಗಳನ್ನು ಪರಿಚಯಿಸುವ ವಾಗರ್ಥ ಚೂಡಾಮಣಿ, ರೀಡರ್ಸ್ ಡೈಜೆಸ್ಟ್, ಆಚಾರವಿಚಾರ, ಚೈತನ್ಯದ ಚಿಲುಮೆ, ಪುರಾಣಪ್ರಪಂಚ, ಲಾ ಪಾಯಿಂಟ್, ವಾಟ್ಸ್ ಅಪ್, ಮೊದಲಾದ ಜನಪ್ರಿಯ ಅಂಕಣಗಳೂ ಇವೆ.
‘ಓ ಮನಸೇ’ ಭಾನುವಾರವೇ ಮಾರುಕಟ್ಟೆಗೆ ಬಂದಿದೆ. ಪುರುಸೊತ್ತು ಮಾಡಿಕೊಂಡು ಓದಿ. ಗೊತ್ತಲ್ವಾ, ಇದು ಮನಸು ಮನಸುಗಳ ಪಿಸುಮಾತು.

O-Manase-video